ಜಿಲ್ಲೆ

ವೃಕ್ಷಲಕ್ಷ ಅಭಿಯಾನಕ್ಕೆ ಚಾಲನೆ 22ರಂದು

ಬಸವರಾಜ ವೀರಪ್ಪ ಗರಗ

ಯಲ್ಲಾಪುರ: ಮಲೆನಾಡಿನ ರೈತರ ಸಾಮೂಹಿಕ ನೈಸರ್ಗಿಕ ಸಂಪತ್ತಿನ ಸುಸ್ಥಿರ ಅಭಿವೃದ್ಧಿಗಾಗಿ ವೃಕ್ಷಲಕ್ಷ ಆಂದೋಲನ ಜಿಲ್ಲಾ ಅಡಕೆ, ಸಾಂಬಾರು, ಬೆಳೆಗಾರರ ಸಂಘ, ಕದಂಬ ಸಾವಯವ ಸಂಸ್ಥೆ, ಜಿಲ್ಲಾ ಸಾವಯವ ರೈತ ಒಕ್ಕೂಟ, ಟಿ.ಎಂ.ಎಸ್. ಯಲ್ಲಾಪುರ ಮತ್ತು ವೃಕ್ಷಲಕ್ಷ ಆಂದೋಲನಗಳ ಸಂಯುಕ್ತ ಆಶ್ರಯದಲ್ಲಿ ಜಾಗೃತಿ ಅಭಿಯಾನ ನಡೆಸಲು ನಿರ್ಣಯಿಸಲಾಗಿದೆ ಎಂದು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಹೇಳಿದರು.

ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಅಭಿಯಾನದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಜೀವ ವೈವಿಧ್ಯತಾ ದಿನಾಚರಣೆ ನಿಮಿತ್ತ ಮೇ 22ರಂದು ತಾಲೂಕಿನ ಆನಗೋಡಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಅಧ್ಯಕ್ಷತೆ ವಹಿಸಿದ್ದ ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಕೆನರಾ ಪ್ರಿವಲೇಜ್​ನಡಿ ಜಿಲ್ಲೆಯ 53 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ, ಬೆಟ್ಟ ಸ್ವಾತಂತ್ರ್ಯೂರ್ವದಿಂದ ಇದ್ದು, ಇದು 1980ರ ಅರಣ್ಯ ಕಾಯ್ದೆಯಡಿ ಬರುವ ಬೆಟ್ಟ ಅಡಕೆ ಬೆಳೆಗಾರರ ನಿರ್ವಹಣೆಯಲ್ಲಿದೆ. ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಅಧಿಕಾರವಿದ್ದರೂ ಜಿಲ್ಲೆಯ ಬೆಟ್ಟಗಳ ಮೇಲೆ ಅರಣ್ಯ ಇಲಾಖೆಯದೇ ಹೆಚ್ಚಿನ ಜವಾಬ್ದಾರಿಯಿದೆ. ಇಂತಹ ಬೆಟ್ಟಗಳಲ್ಲಿ ಸಂರಕ್ಷಣೆಯ ಉದ್ದೇಶದಿಂದ ಕಾಫಿ ಬೆಳೆಯುವ ಕುರಿತಂತೆ ರೈತರು ಚಿಂತಿಸಬೇಕಾಗಿದೆ ಎಂದರು.

ಕಳೆದ 30 ವರ್ಷಗಳಿಂದ ಬೆಟ್ಟ ಅರಣ್ಯ ಉತ್ಪನ್ನದಲ್ಲಿ ಶೇ. 30ರಷ್ಟಿದ್ದ ಪಾಲನ್ನು ಹೆಚ್ಚಿಸುವ ಬಗ್ಗೆ ಮತ್ತು ಬೆಟ್ಟ ಸಂರಕ್ಷಣೆ ಬಗೆಗೆ ಇಲ್ಲಿನ ರೈತರು ಸಂಘ-ಸಂಸ್ಥೆಗಳೊಂದಿಗೆ ಆಗಾಗ ಹೋರಾಟ ನಡೆಸಿದ್ದಿದೆ. ಅಲ್ಲದೆ, ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ತಜ್ಞರ ಸಲಹೆ-ಸೂಚನೆಯೊಂದಿಗೆ ನಡೆಸಿದ ಅನೇಕ ಹೋರಾಟಗಳಿಗೆ ಯಶಸ್ಸು ದೊರೆತಿದೆ. ಆದರೆ, ಬೆಟ್ಟ, ಕುಮ್ಕಿ, ಕಾನು, ಗೋಮಾಳ ಸೇರಿ ವಿವಿಧ ಗ್ರಾಮದ ನೈಸರ್ಗಿಕ ಸಾಮೂಹಿಕ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಲೀಸ್ ನೀಡುವ ಯೋಜನೆಗಳಿಗೆ ಸರ್ಕಾರ ಪ್ರಯತ್ನಿಸಿದ ಸಂದರ್ಭದಲ್ಲಿ 2 ವರ್ಷ ಹಿಂದೆಯೇ ವಿರೋಧಿಸಿದ್ದ ಪರಿಣಾಮ ಸರ್ಕಾರ ಯೋಜನೆಯನ್ನು ಕೈಬಿಟ್ಟಿದೆ. ಆದಾಗ್ಯೂ ಪಶ್ಚಿಮಘಟ್ಟದ ಬೆಟ್ಟ, ಕಾನು, ಗೋಚರ, ಸೊಪ್ಪಿನ ಮುಫತ್ತು ಮುಂತಾದ ಗ್ರಾಮ ಅರಣ್ಯ ಭೂಮಿಗಳನ್ನು ರಣ್ಯೇತರ ಉದ್ದೇಶಗಳಿಗೆ ಬಳಸುವ ಸರ್ಕಾರದ ಹಿಂಬಾಗಿಲು ಯೋಜನೆಗಳೂ ಮುನ್ನೆಲೆಗೆ ಬರುತ್ತಿವೆಯಲ್ಲದೆ, ಬೆಟ್ಟ ಅರಣ್ಯ ನಾಶ ಪ್ರಕರಣಗಳು ಜರುಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂತಹ ರೈತ ವಿರೋಧಿ ಸರ್ಕಾರದ ನಡೆಯನ್ನು ವಿರೋಧಿಸುವ ಹಿನ್ನೆಲೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಟ್ಟಗಳಲ್ಲಿ ಯಾವುದೇ ಬಗೆಯ ಹಣ್ಣು-ಹಂಪಲುಗಳನ್ನು ಬೆಳೆದರೂ ಮಂಗ ಮತ್ತು ವನ್ಯಜೀವಿಗಳ ಕಾಟ ಮಿತಿಮೀರಿದೆ. ಆದ್ದರಿಂದ ನಮ್ಮ ಪ್ರದೇಶದಲ್ಲಿ ಅವುಗಳ ನೀರ್ವಹಣೆ ಕಷ್ಟ ಎಂದು ರವಿ ಭಟ್ಟ ಬರಗದ್ದೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಶಿಸುತ್ತಿರುವ ಬೆಟ್ಟಗಳ ಸಂರಕ್ಷಣೆಯ ಸಂದರ್ಭದಲ್ಲಿ ವಿವಿಧ ತಳಿಯ ಹಲಸು ಮತ್ತು ಶಮಿ ಬಿದಿರು ಬೆಳೆಯುವುದು ಲಾಭದಾಯಕ ಎಂದು ಕದಂಬ ಸಂಸ್ಥೆಯ ಪ್ರಮುಖ ವಿಶ್ವೇಶ್ವರ ಭಟ್ಟ ಹೇಳಿದರು.

ಯಡಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ, ತಾಲೂಕು ರೈತ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ವಿವಿಧ ಸಂಘಟನೆಗಳ ಪ್ರಮುಖರಾದ ಗಣಪತಿ ಬಿಸಲಕೊಪ್ಪ, ದತ್ತಾತ್ರೇಯ ಬೊಳಗುಡ್ಡೆ, ಕೆ.ಎಸ್. ಭಟ್ಟ ಆನಗೋಡ, ನರಸಿಂಹ ಸಾತೊಡ್ಡಿ, ಇತರರಿದ್ದರು.