ಮೈಸೂರು: ಎಸ್‌ಪಿ ಕಚೇರಿ ಬಳಿ ರಸ್ತೆ ವಿಸ್ತರಣೆಗೆ 40ಕ್ಕೂ ಹೆಚ್ಚು ಮರಗಳನ್ನು ಕಡಿದಿರುವುದನ್ನು ಖಂಡಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬುಧವಾರ ಮರ ಕಡಿದ ಜಾಗದಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ತರ್ಕ ರಹಿತ ನಿರ್ಧಾರ ತೆಗೆದುಕೊಂಡು ಮರಗಳನ್ನು ಕಡಿದು ಹಾಕಿದೆ. ಈಗಾಗಲೇ ಈ ರಸ್ತೆ ಸಾಕಷ್ಟು ವಿಸ್ತಾರವಾಗಿದೆ. ಹೀಗಿದ್ದರೂ ಕೇವಲ ಇನ್ನೂರು ಮೀಟರ್ ರಸ್ತೆಯ ವಿಸ್ತರಣೆ ಹೆಸರಿನಲ್ಲಿ ನೂರು ವರ್ಷಕ್ಕೂ ಹೆಚ್ಚು ಕಾಲದ 40 ಮರಗಳನ್ನು ಕಡಿದಿರುವುದು ಖಂಡನೀಯ. ಇವರ ಬಳಿ ಇರುವ ತರ್ಕವಾದರೂ ಏನು? ರಸ್ತೆಯಲ್ಲಿ ಹೆಚ್ಚು ಅಪಘಾತವಾಗುತ್ತಿತ್ತೆ? 200 ಮೀಟರ್ ರಸ್ತೆ ಇದೀಗ ರಾಷ್ಟ್ರೀಯ ಹೆದ್ದಾರಿಯಾಗಿದೆಯೇ? ಅಲ್ಲಿದ್ದ ಮರಗಳಿಂದ ಯಾರಿಗಾದರೂ ತೊಂದರೆ ಆಗುತ್ತಿತ್ತೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ಪ್ರಶ್ನಿಸಿದರು.
ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತ ಘೋರ ಕೃತ್ಯ ಎಂದು 20 ದಿನಗಳ ಹಿಂದಷ್ಟೇ ಸರ್ವೋಚ್ಛ ನ್ಯಾಯಾಲಯ ಆದೇಶ ಮಾಡಿದೆ. ತಪ್ಪು ಮಾಡಿದ ವ್ಯಕ್ತಿಗೆ ಪ್ರತಿ ಮರಕ್ಕೂ ಒಂದು ಲಕ್ಷದಂತೆ ದಂಡ ವಿಧಿಸಿದೆ. ಇಡೀ ಪ್ರಪಂಚದಲ್ಲಿ ಮರ ಬೆಳೆಸಿ ಎಂದು ಹೇಳುತ್ತಿರುವಾಗ ವಿನಾಕಾರಣ ಕಳ್ಳರಂತೆ ಮಧ್ಯರಾತ್ರಿಯಲ್ಲಿ ನಲವತ್ತು ಮರಗಳನ್ನು ಕಡಿದಿರುವುದು ಸಮಾಜದ್ರೋಹಿ, ಹೇಡಿತನದ ಕೃತ್ಯ. ಈ ಕೃತ್ಯಕ್ಕೆ ಆದೇಶ ಹೊರಡಿಸಿದವರ ವಿರುದ್ಧ ಹಾಗೂ ಈ ಕೃತ್ಯ ಎಸೆಗಲು ಗುತ್ತಿಗೆ ತೆಗೆದುಕೊಂಡ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಬೇಕು ಎಂದು ಆಗ್ರಹಿಸಿದರು.
ಈ ಕೃತ್ಯಕ್ಕೆ ಬೆಂಬಲ ಸೂಚಿಸಿದ ನಗರ ಪಾಲಿಕೆ, ಜಿಲ್ಲಾಧಿಕಾರಿ ಇಂದು ನೆಡಲಾದ 40 ಸಸಿಗಳಿಗೆ ನಿತ್ಯ ನೀರು ಉಣಿಸಿ ಕಾಪಾಡಬೇಕು. ರಸ್ತೆಯ ಅಗಲೀಕರಣ ಮಾಡಲು ಮುಂದಾದರೆ ತೀವ್ರ ಹೋರಾಟ ನಡೆಸಲಾಗುವುದು. ಅಧಿಕಾರಿಗಳು ತಾವು ಮಾಡಿರುವ ಕರ್ಮದ ಕೆಲಸವನ್ನು ಇಲ್ಲಿಗೆ ಕೈ ಬಿಟ್ಟು, ನೆಟ್ಟ ಸಸಿಗಳನ್ನು ಕಾಪಾಡಿಕೊಂಡು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮೋಹನ್ ಕಮಾರ್, ಕಿರಣ್, ಕಾರ್ತಿಕ್, ಶಿವು, ಗಳಿಗರಹುಂಡಿ ವೆಂಕಟೇಶ್, ವರಕೂಡು ಕೃಷ್ಣೇಗೌಡ, ಕಡಕೊಳ ಕುಮಾರ್, ನಂಜನಗೂಡು ವೇಣು, ಹುಲ್ಲಹಳ್ಳಿ ಸತೀಶ್, ಅನಿಲ್ ಥಾಮಸ್, ಜಾನ್ಸನ್ ಪಾಲ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಲಿಂಗರಾಜು, ಲಾರಿ ಮಾಲೀಕರ ಸಂಘದ ಕೋದಂಡರಾಮ, ಶಾಹಿದ್ ಹಾಗೂ ಇತರರು ಪಾಲ್ಗೊಂಡಿದ್ದರು.