ಜಿಲ್ಲೆ

ಭಾರಿ ಗಾಳಿ ಮರ ಬಿದ್ದು 9 ಬೈಕ್‌ಗಳು ಜಂಕಂ

Uttara Kannada - Subash Hegde

ಕಾರವಾರ: ಗಾಳಿ, ಬಿಸಿಲು, ಮಳೆ ಹೀಗೆ ಕ್ಷಣಕ್ಕೊಂದು ವಾತಾವರಣ ಸೃಷ್ಟಿಯಾಗುತ್ತಿದೆ. ಪ್ರತಿದಿನವೂ ಸಣ್ಣದಾಗಿ ಮಳೆಯಾಗುತ್ತಿದೆ. ಇದೇ ಪರಿಸ್ಥಿತಿ ಅಕ್ಟೋಬರ್ 27 ರವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗಾಳಿಯಿಂದ ಕಾರವಾರ ಕದಂಬ ನೌಕಾನೆಲೆಯ ಕಂಪೌಂಡ್ ಹೊರಗಿನ ಭಾರಿ ಗಾತ್ರದ ಮಾವಿ ಮರ ಮುರಿದು ಬಿದ್ದಿದೆ. ಇದರಿಂದ ನಿಲ್ಲಿಸಿಟ್ಟಿದ್ದ ಏಳು ಬೈಕ್‌ಗಳು ಜಕಂಗೊಂಡಿದ್ದು, ಆಕಳೊಂದು ಮೃತಪಟ್ಟಿದೆ. ವಿವಿಧೆಡೆ ವಿದ್ಯುತ್ ಲೈನ್ ಮೇಲೆ ಮರ ಮುರಿದು ಬಿದ್ದಿದ್ದು, ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಶುಕ್ರವಾರ ಬೆಳಗಿನ ವರದಿಯಂತೆ ಜಿಲ್ಲೆಯಲ್ಲಿ ಸರಾಸರಿ 4.4 ಮಿಮೀ ಮಳೆಯಾಗಿದೆ. ಹಳಿಯಾಳ-10.6, ಭಟ್ಕಳ 8.1, ದಾಂಡೇಲಿ-8.7, ಜೊಯಿಡಾ-6.8, ಮುಂಡಗೋಡ-5.7 ಮಿಮೀ ಮಳೆಯಾಗಿದೆ. ಉಳಿದೆಡೆ 5 ಮಿಮೀಗಿಂತ ಕಡಿಮೆ ಮಳೆಯಾಗಿದೆ.

ರೈತರಿಗೆ ಆತಂಕ

ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಮಳೆ ಕಡಿಮೆಯಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್ ತಿಂಗಳು ಕಳೆಯುತ್ತ ಬಂದರೂ ಮಳೆ ಕಡಿಮೆಯಾಗದೇ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕರಾವಳಿಯ ಐದು ತಾಲೂಕುಗಳು ಹಾಗೂ ಮುಂಡಗೋಡ, ಶಿರಸಿಯ ಕೆಲ ಭಾಗದಲ್ಲಿ ಈಗಾಗಲೇ ಭತ್ತ ಕೊಯ್ಲಿಗೆ ಬಂದಿದೆ. ಈಗಾಗಲೇ ಕೊಯ್ದ ಭತ್ತ ಮಳೆಗೆ ಸಿಲುಕಿದೆ. ಇನ್ನೂ ಕೆಲವರ ಗದ್ದೆಯ ಭತ್ತ ಮಾಗಿದ್ದರೂ ಕೊಯ್ಲು ಮಾಡಲು ಮಳೆಯೇ ಬಿಡುತ್ತಿಲ್ಲ. ಅಡಕೆ ಬೆಳೆಗಾರರಿಗೂ ಆತಂಕ ಉಂಟಾಗಿದೆ. ಹೊಸದಾಗಿ ಸಿಂಗಾರ ಮೂಡುತ್ತಿದ್ದು, ಅವುಗಳು ಕೊಳೆತು ಹೋಗುವ ಆತಂಕವಿದೆ.

27 ರವರೆಗೂ ಮಳೆ

ಇನ್ನೂ ಕೆಲ ದಿನ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಕ್ಟೋಬರ್ 26 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 27 ಮತ್ತೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 28 ರಿಂದ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.