ಮಡಿಕೇರಿ: ಪರಾಧೀನ ಜಮೀನನ್ನು ಕಂದಾಯಕ್ಕೆ ಒಳಪಡಿಸಿದ ದಿನದಿಂದ ಆ ಜಮೀನಿನಲ್ಲಿ ಬೆಳೆದಿರುವ ಮರಗಳು ಆ ಜಮೀನಿನ ಮಾಲೀಕನಿಗೆ ಸೇರುತ್ತದೆ ಎಂದು ಕರ್ನಾಟಕ ಸರ್ಕಾರ ಇತ್ತೀಚೆಗೆ ಕೊಡಗಿನ ರೈತರ ಪರವಾಗಿ ಆದೇಶ ಹೊರಡಿಸಿದೆ. ಈ ಆದೇಶದಿಂದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಶನ್, ಸಣ್ಣ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ ಸೇರಿದಂತೆ ಜಿಲ್ಲೆಯ ರೈತರು, ಕಾಫಿ ಬೆಳೆಗಾರರು ಖುಷಿಯಾಗಿದ್ದಾರೆ.
ಮರದ ಹಕ್ಕಿನ ಬಗ್ಗೆ ಅನುಮತಿ ನೀಡುವಲ್ಲಿ ಅಡಚಣೆಯಾಗಿರುವ ೨೦೧೬ರ ಸರಕಾರಿ ಆದೇಶವೊಂದರಲ್ಲಿರುವ ದೋಷವನ್ನು ಪರಿಗಣಿಸಿ, ಅದನ್ನು ತಿದ್ದುಪಡಿ ಮಾಡಲು ೨೦.೦೩.೨೦೨೩ರಂದು ಸರಕಾರ ಆದೇಶ ಹೊರಡಿಸಿದೆ. ಅದರ ಮುಖಾಂತರ ಇಲಾಖಾ ಅಧಿಕಾರಿಗಳಿಗೆ ಇದ್ದ ಹಲವಾರು ಗೊಂದಲಗಳನ್ನು ನಿವಾರಿಸಲಾಗಿದೆ. ಪರಾಧೀನ ಜಮೀನಿನ ಮಾಲೀಕತ್ವ ಹಾಗೂ ಅನುಭವದ ಬಗ್ಗೆ ಇರುವ ಹಲವು ಚರ್ಚೆಗಳಿಗೆ ತೆರೆ ಎಳೆದು ಜಮೀನಿನ ಸ್ವಾಧೀನದಾರನಿಗೆ ಇರುವ ಪರಿಪೂರ್ಣ ಮಾಲೀಕತ್ವ ಮತ್ತು ಅಧಿಕಾರವನ್ನು ದೃಢೀಕರಿಸಿರುತ್ತದೆ. ಈ ತಿದ್ದುಪಡಿಯ ಮುಖ್ಯ ಅಂಶದ ಪ್ರಕಾರ ಪರಾಧೀನ ಜಮೀನನ್ನು ಕಂದಾಯಕ್ಕೆ ಒಳಪಡಿಸಿದ ದಿನದಿಂದ ಆ ಜಮೀನಿನ ಮೇಲೆ ಬೆಳೆದಿರುವ ಮರಗಳು ಆ ಜಮೀನಿನ ಮಾಲೀಕನಿಗೆ ಸೇರುತ್ತದೆ. ಜೊತೆಗೆ ಕಂದಾಯಕ್ಕೆ ಒಳಪಡಿಸುವ ಮೊದಲು ಜಮೀನಿನಲ್ಲಿ ಮರ ಬೆಳೆದು ನಿಂತಿದ್ದರೆ ಆಗ ಕೃಷಿಕ ಮತ್ತು ಸರಕಾರ ಸಮಪ್ರಮಾಣದಲ್ಲಿ ಮರದ ಮೌಲ್ಯವನ್ನು ಹಂಚಿಕೊಳ್ಳಬೇಕು ಎಂಬುದನ್ನು ಅತ್ಯಂತ ಸ್ಪಷ್ಟತೆಯಿಂದ ಹೇಳಲಾಗಿದೆ.
ಈ ಒಂದು ಆದೇಶಕ್ಕಾಗಿ ಕೊಡಗಿನ ರೈತರು, ಬೆಳೆಗಾರರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರು. ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದದವು. ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೂಡ ಈ ಹೋರಾಟಕ್ಕೆ ಒತ್ತಾಸೆಯಾಗಿ ನಿಂತಿದ್ದರು.
ಪರಾಧೀನ ಜಮೀನನ್ನು ಕಂದಾಯಕ್ಕೆ ಒಳಪಡಿಸಿದ ದಿನದಿಂದ ಆ ಜಮೀನಿನಲ್ಲಿ ಬೆಳೆದಿರುವ ಮರಗಳು ಆ ಜಮೀನಿನ ಮಾಲೀಕನಿಗೆ ಸೇರಬೇಕು ಎನ್ನುವುದು ಜಿಲ್ಲೆಯ ರೈತರು, ಬೆಳೆಗಾರರ ಬಹಳ ವರ್ಷದ ಬೇಡಿಕೆ. ಈ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚೆ ನಡೆಸಿ ೨೦.೦೩.೨೦೨೩ರಂದು ಆದೇಶ ಹೊರಬೀಳುವಲ್ಲಿ ಸಾಕಷ್ಟು ಪ್ರಯತ್ನ ನಡೆಸಲಾಗಿದೆ. ಇದೀಗ ಈ ಆದೇಶ ಹೊರಬಿದ್ದಿರುವುದರಿಂದ ಪರಾಧೀನ ಜಮೀನಿನ ಮಾಲೀಕತ್ವ ಹಾಗೂ ಅನುಭವದ ಬಗ್ಗೆ ಇರುವ ಹಲವು ಗೊಂದಲಗಳಿಗೆ ತೆರೆ ಬಿದ್ದಿದೆ. ಇದರಿಂದ ಕೊಡಗಿನ ರೈತರಿಗೆ, ಬೆಳೆಗಾರರಿಗೆ ದೊಡ್ಡ ಮಟ್ಟಿಗೆ ಪ್ರಯೋಜನ ಆಗಲಿದೆ.
ಎಂ.ಪಿ. ಅಪ್ಪಚ್ಚು ರಂಜನ್, ಮಡಿಕೇರಿ ಶಾಸಕ
ರೈತನ ಭೂಮಿಯಲ್ಲಿ ಬೆಳೆದ ಮರದ ಹಕ್ಕು ರೈತನಿಗೆ ಸಂಪೂರ್ಣವಾಗಿ ದೊರೆಯಬೇಕು. ಸ್ವಂತ ಉಪಯೋಗಕ್ಕೆ ತಾವು ಬೆಳೆದ ಮರ ಪ್ರಯೋಜನಕ್ಕೆ ಬರದಿದ್ದರೆ ರೈತನ ಹಕ್ಕು ಕಸಿದಂತೆ. ಸ್ವಂತ ಉಪಯೋಗಕ್ಕೆ ನಿಯಮಗಳು ಸಡಿಲಗೊಳ್ಳಬೇಕು. ಆಗ ಭೃಷ್ಠಾಚಾರ ಕೂಡ ಕಡಿಮೆಯಾಗುತ್ತದೆ.
ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೃಷಿಕ, ಪೊನ್ನಂಪೇಟೆ.
ಸ್ವಾಧೀನದಾರನಿಗೆ ಮರದ ಹಕ್ಕು ನೀಡುರುವುದು ನ್ಯಾಯ ಸಮ್ಮತವಾಗಿದೆ. ನ್ಯಾಯಾಲಯ ಕೂಡ ಇದನ್ನೇ ಹೇಳಿದೆ. ಸ್ವಂತ ಉಪಯೋಗಕ್ಕೆ ಬೇಕಾದ ಮರ, ಸೌದೆ ಎಲ್ಲವೂ ಮಾಲೀಕನಿಗೆ ದೊರೆಯಬೇಕು.
ಮಚ್ಚಮಾಡ ಟಿ. ಕಾರ್ಯಪ್ಪ, ವಕೀಲರು, ಶ್ರೀಮಂಗಲ.
ಪರಾಧೀನ ಜಾಗದ ಹಕ್ಕಿನಲ್ಲಿ ಮರದ ಹಕ್ಕು ಕೂಡ ಇರಬೇಕು. ನಿಬಂಧನೆಗಳಲ್ಲಿ ರೆಡೀಂ ಮರ ಕಡಿಯಲು ಅವಕಾಶ ನೀಡಿದರೆ ಉತ್ತಮ. ಇದು ಎಲ್ಲರಿಗೂ ಪ್ರಯೋಜನವಾಗುತ್ತದೆ. ವಿಶೇಷ ಸವಲತ್ತು ಪಡೆಯಲು ಹಕ್ಕು ನೀಡಬೇಕಿದೆ.
ಚೆಪ್ಪುಡೀರ ರಾಮಕೃಷ್ಣ, ಅಧ್ಯಕ್ಷರು, ತಿತಿಮತಿ ಪ್ಯಾಕ್ಸ್.
ರೈತನಿಗೆ ಬಾಣೆ ಜಮೀನಿನ ಮೇಲೆ ಹಕ್ಕು ಇರುತ್ತದೆ, ಆದರೆ ಅದರಲ್ಲಿ ಬೆಳೆದಿರುವ ಮರಗಳ ಮೇಲೆ ಮಾಲಕತ್ವ ಇರುವುದಿಲ್ಲ ಎಂಬ ಅರ್ಥಹೀನ ಹಿಂಬರಹ ಕೊಡುವುದು ಅನೇಕ ಸಮಯದಿಂದ ನಡೆಯುತ್ತಾ ಬಂದಿತ್ತು. ಅಂತಹ ಸಮಯದಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡಿದರೂ, ಅರಣ್ಯ ಡಿಪೋಗೆ ಸಾಗಿಸಲಾದ ಮರಗಳ ಮೌಲ್ಯಗಳನ್ನು ಪಾವತಿಸಲು ಅರಣ್ಯ ಇಲಾಖೆ ನಿರಾಕರಿಸುತ್ತಾ ಬಂದಿರುತ್ತದೆ. ಇನ್ನು ಅಂತಹ ಸಮಸ್ಯೆ ಇರುವುದಿಲ್ಲ.
ಕೆ.ಕೆ. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ, ಕೊಡಗು ಬೆಳೆಗಾರರ ಒಕ್ಕೂಟ
ಪರಾಧೀನ ಜಮೀನಿನ ಸ್ವಾಧೀನದಾರನಿಗೆ ಮರದ ಮೇಲಿರುವ ಮಾಲಕತ್ವದ ಬಗ್ಗೆ ನ್ಯಾಯಾಲಯಗಳು ನಿಖರವಾಗಿ ಹೇಳುತ್ತಾ ಬಂದರೂ ಅದನ್ನು ಪರಿಗಣಿಸುವಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಿರಾಸಕ್ತಿ ತೋರಿಸುತ್ತಾ ಬಂದಿದ್ದರು. ಇದೀಗ ಪರಾಧೀನ ಜಮೀನನ್ನು ಕಂದಾಯಕ್ಕೆ ಒಳಪಡಿಸಿದ ದಿನದಿಂದ ಆ ಜಮೀನಿನಲ್ಲಿ ಬೆಳೆದಿರುವ ಮರಗಳು ಆ ಜಮೀನಿನ ಮಾಲೀಕನಿಗೆ ಸೇರುತ್ತದೆ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವುದರಿಂದ ಬೆಳೆಗಾರರು ನಿರಾಳರಾಗಿದ್ದಾರೆ.
ಸಿರಕಜೆ ಲೋಕಪ್ರಕಾಶ್, ಕೃಷಿಕ, ಭಾಗಮಂಡಲ
ಕೃಷಿಕನೊಬ್ಬ ತನ್ನ ಜಮೀನಿನಲ್ಲಿ ಬೆಳೆದ ಮರಗಳನ್ನು ಮಾರಾಟ ಮಾಡಲಾಗಲೀ, ಕೃಷಿಗೆ ಅಡಚಣೆಯಾದ ಮರದ ಕೊಂಬೆಗಳನ್ನು ಕಡಿಯಲಾಗಲೀ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಅರಣ್ಯ ಇಲಾಖೆಯು ಕಂದಾಯ ಇಲಾಖೆಗೆ ಕಡತವನ್ನು ಕಳುಹಿಸಿ ಮರದ ಹಕ್ಕಿನ ಬಗ್ಗೆ ಅಭಿಪ್ರಾಯವನ್ನು ಕೇಳುವುದು ಚಾಲ್ತಿಯಲ್ಲಿರುವ ಪದ್ಧ್ದತಿಯಾಗಿತ್ತು. ಇದರಿಂದ ಕೃಷಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಈ ಹೊಸನ ಬೆಳವಣಿಗೆ ಅನುಕೂಲಕರವಾಗಿದೆ.
ಯೋಗಾನಂದ, ಬೆಳೆಗಾರ, ಮುಕ್ಕೋಡ್ಲು
ಸರ್ಕಾರದ ಈ ಆದೇಶ ಟಿಂಬರ್ ಮಾಫಿಯಾಗಳಿಗೆ ಮಾತ್ರ ಅನುಕೂಲವಾಗಲಿದೆ. ಆರ್.ಟಿ.ಸಿಯಲ್ಲಿ ಜಮ್ಮಾಬಾಣೆ, ಸಾಗುಬಾಣೆ ಎಂದು ನಮೂದಿಸಿದರೆ ಮಾತ್ರ ಜಾಗ ಮಾಲೀಕರಿಗೆ ಮರದ ಮಾಲೀಕತ್ವ ದೊರೆಯುತ್ತದೆ. ಮರದ ಮಾಲೀಕತ್ವ ರೈತರಿಗೆ ಸೇರಬೇಕೆ ವಿನಃ ಸರಕಾರದಲ್ಲ. ಸರ್ಕಾರ ಈ ಆದೇಶವನ್ನು ಪುನರ್ ಪರೀಶೀಲನೆ ಆರಟಿಸಿಯಲ್ಲಿ ನಮೂದಿಸಿರುವ ಎಲ್ಲಾ ಜಾಗಗಳಿಗೆ ಅನ್ವಯ ಆಗಬೇಕು.
ಅನಿಲ್ ಮಂಡೆಟ್ಟಿರ, ಬೆಳೆಗಾರ, ಕಾಕೋಟುಪರಂಬು.
ಆರ್ ಟಿ ಸಿಯಲ್ಲಿ ಪೌತಿ ಖಾತೆ ಆಗದಿದ್ದರೆ ಜಮ್ಮಾ ಮತ್ತು ಸಾಗುಬಾಣೆಯಲ್ಲಿನ ರ‌್ಯೆತರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಯಾರ ಹೆಸರಿನಲ್ಲಿ ಸಿಂಗಲ್ ಆರ್.ಟಿ.ಸಿ ಇದೆ ಅವರಿಗೆ ಉಪಯೋಗವಾಗುತ್ತದೆ. ಆರ್‌ಟಿಸಿಯಲ್ಲಿ ಗುಂಪು ಹೆಸರಿನ ಕುಟುಂಬದ ಎಲ್ಲಾ ಸದಸ್ಯರಿಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಿದರೆ ಅನುಕೂಲವಾಗುತ್ತದೆ.
ಚೇಂದ್ರಮಾಡ ಗಣೇಶ್ ನಂಜಪ್ಪ, ಮಾಜಿ ಅಧ್ಯಕ್ಷರು, ಮಾಜಿ ಸೈನಿಕರ ಸಹಕಾರ ಸಂಘ ವಿರಾಜಪೇಟೆ
ಜಮ್ಮಾ ಭೂಮಿ ಮಾಲೀಕತ್ವ ಹಕ್ಕು ಮಾಲೀಕರಿಗೆ ಸಿಗಬೇಕು ಎಂಬುದು ಮಾಲೀಕರ ಬೇಡಿಕೆಯಾಗಿರುತ್ತದೆ. ಅದರಲ್ಲೂ ಮರದ ಮಾಲೀಕತ್ವ ಜಮ್ಮಾ ಭೂಮಿ ಮಾಲೀಕನದ್ದು. ಮರ ಮಾರಾಟದಿಂದ ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಅತಿ ವೃಷ್ಟಿಯಿಂದ ಕಾಫಿ, ಕಾಳುಮೆಣಸು ಫಸಲು ಹಾನಿಯಾಗುತ್ತಿದೆ. ಮಾಲೀಕ ಎಷ್ಟು ಮರಗಳನ್ನು ಕಡಿಯುತ್ತಾನೋ ಅಷ್ಟೇ ಮರಗಳನ್ನು ಬೆಳೆಸಿ, ಪರಿಸರಕ್ಕೆ ಕೊಡುಗೆ ನೀಡುತ್ತಾನೆ.
ಆಪಾಡಂಡ ಆಶಾ ವೀರರಾಜು, ಗೃಹಿಣಿ, ಸೋಮವಾರಪೇಟೆ