ಎನ್.ಆರ್.ಪುರ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ 1650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು ಎಂದು ಸರ್ಕಾರಿ ಆಸ್ಪತ್ರೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವಿಭಾಗದ ಆರೋಗ್ಯ ಮಿತ್ರ ಮಂಜಳಾ ತಿಳಿಸಿದರು.
ಶುಕ್ರವಾರ ರೋಟರಿ ಕ್ಲಬ್ ಹಾಗೂ ಹಿರಿಯ ನಾಗರಿಕ ವೇದಿಕೆ ಏರ್ಪಡಿಸಿದ್ದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮಾಹಿತಿ ನೀಡಿ, ಈ ಹಿಂದೆ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿತ್ತು. ನಂತರ ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿತು. ನಂತರ ರಾಜ್ಯ ಸರ್ಕಾರ ಎರಡೂ ಯೋಜನೆಗಳನ್ನು ಒಟ್ಟು ಮಾಡಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಂಬ ಯೋಜನೆ ಜಾರಿಗೊಳಿಸಿತು ಎಂದು ತಿಳಿಸಿದರು.
ಯೋಜನೆ ಪ್ರಕಾರ ಬಿಪಿಎಲ್ ಕಾರ್ಡ್‌ದಾರರಿಗೆ 5 ಲಕ್ಷ ರೂಪಾಯಿವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ. ಎಪಿಎಲ್ ಕಾರ್ಡ್‌ದಾರರಿಗೆ 1.50 ಲಕ್ಷ ರೂಪಾಯಿವರೆಗೆ ಚಿಕಿತ್ಸೆ ಪಡೆಯಬಹುದು. ಪ್ರಥಮ ಹಂತದ ಕಾಯಿಲೆಗಳಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ದ್ವಿತೀಯ ಹಂತದ ಕಾಯಿಲೆಗಳಿಗೆ ತಾಲೂಕು ಅಥವಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ತೃತೀಯ ಹಂತದ ಕಾಯಿಲೆಗಳಾದ ಕ್ಯಾನ್ಸರ್, ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮುಂತಾದ ಗಂಭೀರ ರೋಗಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ತಾಲೂಕು ಅಥವಾ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಶಿಫಾರಸಿನ ಪತ್ರ ತರುವುದು ಕಡ್ಡಾಯ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಿಂದಲೇ ಹಣ ಭರಿಸಲಾಗುವುದು. ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿಗಳನ್ನು ಆಸ್ಪತ್ರೆಗಳಿಗೆ ಸಲ್ಲಿಸಬೇಕು. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದಾಗ ಚಿಕಿತ್ಸೆ ನೀಡುತ್ತಾರೆ. ನಂತರ ತಾಲೂಕು ಸರ್ಕಾರಿ ಆಸ್ಪತ್ರೆಯಿಂದ ಪತ್ರ ನೀಡಲಾಗುತ್ತದೆ ಎಂದು ಹೇಳಿದರು.
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಶಿವಮೊಗ್ಗ ಶಾಖೆ ಸೀನಿಯರ್ ಮ್ಯಾನೇಜರ್ ಉಮೇಶ್ ನಾಯಕ್ ಮಾತನಾಡಿ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಕಂಪೆನಿ ದೇಶಾದ್ಯಂತ 16 ಸಾವಿರ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿ 4 ರಿಂದ 5 ಸಾವಿರ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ದೇಶದಲ್ಲಿ ಸ್ಟಾರ್ ಹೆಲ್ಸ್ ಇನ್ಶೂರೆನ್ಸ್‌ನ 951 ಶಾಖೆಗಳಿವೆ. ರಾಜ್ಯದಲ್ಲಿ 250 ಶಾಖೆಗಳಿವೆ. ಕಂಪೆನಿಯಲ್ಲಿ 550 ತಜ್ಞ ವೈದ್ಯರಿದ್ದಾರೆ ಎಂದು ತಿಳಿಸಿದರು.
ತಾಲೂಕು ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ಎಚ್.ಆರ್.ದಿನೇಶ್, ರೋಟರಿ ಕ್ಲಬ್ ಅಧ್ಯಕ್ಷ ಎನ್.ಕೆ.ಕಿರಣ್, ಕಾರ್ಯದರ್ಶಿ ಪಿ.ಎಸ್.ವಿದ್ಯಾ ನಂದಕುಮಾರ್ ಇದ್ದರು.