ಬೂದಿಕೋಟೆ: ರಾಸುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ಇತರೆ ರಾಸುಗಳಿಗೂ ಮುನ್ನೆಚ್ಚರಿಕೆಯಾಗಿ ಪಶು ಇಲಾಖೆಯ ವೈದ್ಯರ ತಂಡ ಲಸಿಕೆಗಳನ್ನು ನೀಡಲು ಮುಂದಾಗಿದ್ದಾರೆ.
ಬಂಗಾರಪೇಟೆ ತಾಲೂಕಿನ ಗಡಿ ಭಾಗದ ಹಲವು ಗ್ರಾಮಗಳಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡು, ವೈದ್ಯರ ಕೊರತೆಯಿಂದ ಚಿಕಿತ್ಸೆ ನೀಡಲು ಪರದಾಡುವಂತಾಗಿತ್ತು. ಜತೆಗೆ ಸಕಾಲಕ್ಕೆ ಚಿಕಿತ್ಸೆ ಲಭಿಸದೆ ಹಲವು ರಾಸುಗಳು ಮೃತಪಟ್ಟಿದ್ದವು. ಈ ಕುರಿತು ಶುಕ್ರವಾರ ವಿಜಯವಾಣಿಯಲ್ಲಿ "ರಾಸುಗಳಲ್ಲಿ ಉಲ್ಪಣಿಸಿದ ಚರ್ಮಗಂಟು ರೋಗ' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಪಶು ಇಲಾಖೆಯ ಅಧಿಕಾರಿಗಳು ರೋಗ ಕಾಣಿಕೊಂಡಿರುವ ಗಡಿ ಗ್ರಾಮಗಳಾದ ಕನುಮನಹಳ್ಳಿ, ಚತ್ತಗುಟ್ಟಹಳ್ಳಿ, ಕದಿರಿನತ್ತ ಇತರೆ ಗ್ರಾಮಗಳಿಗೆ ಶುಕ್ರವಾರವೇ ಭೇಟಿ ನೀಡಿ ಚರ್ಮಗಂಟು ರೋಗಕ್ಕೆ ತುತ್ತಾಗಿರುವ ರಾಸುಗಳಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಜತೆಗೆ ರೋಗ ಬರದಂತೆ ಇತರೆ ರಾಸುಗಳಿಗೆ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸಲು ಕಾರ್ಯಪ್ರವೃತ್ತರಾಗಿದ್ದಾರೆ.
ಪಶು ಇಲಾಖೆಯ ಡಿಡಿ ಜಿ.ಟಿ.ರಾಮಯ್ಯ ಮಾತನಾಡಿ, ಗಡಿ ಗ್ರಾಮಗಳಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಕಾರಣ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಲು ಒಂದು ವಾಹನ ಮತ್ತು ಇಬ್ಬರು ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ರೋಗಕ್ಕೆ ತುತ್ತಾದ ರಾಸುಗಳ ಆರೈಕೆಗೆ ಬೇಕಾದ ಎಲ್ಲ ಔಷಧೋಪಚಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇಲಾಖೆಯಿಂದ ಸರಬರಾಜು ಮಾಡಲಾಗಿದೆ. ರೋಗಕ್ಕೆ ತುತ್ತಾದ ರಾಸುಗಳನ್ನು ಪ್ರತ್ಯೇಕ ಮಾಡಿ ಇತರೆ ರಾಸುಗಳಿಗೆ ರೋಗ ಹರಡದಂತೆ ನೋಡಿಕೊಳ್ಳಲು ಸಾರ್ವಜನಿಕರಿಗೆ ಹಾಗೂ ರೈತರಿಗೆ ತಿಳಿಸಲಾಗಿದೆ. ಇತರೆ ಗ್ರಾಮಗಳಲ್ಲಿ ರೋಗ ಕಂಡು ಬಂದರೆ ಕೂಡಲೇ ಪಶು ಇಲಾಖೆಯ ವೈದ್ಯರಿಗೆ ಅಥವಾ ಸಿಬ್ಬಂದಿಗೆ ವಿಷಯ ತಿಳಿಸಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ರಾಸುಗಳನ್ನು ಪ್ರಾಣಾಪಾಯದಿಂದ ಕಾಪಾಡಬಹುದು ಎಂದರು.
ರೋಗ ನಿಯಂತ್ರಣಕ್ಕೆ ನಿಯೋಜನೆ ಮಾಡಿರುವ ಪಶು ವೈದ್ಯರು ವಾರಕ್ಕೆ ಎರಡು ದಿನ ಗಡಿ ಗ್ರಾಮಗಳತ್ತ ಭೇಟಿ ನೀಡಿ ರಾಸುಗಳಲ್ಲಿ ರೋಗ ಉಲ್ಬಣನವಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ರೋಗಕ್ಕೆ ತುತ್ತಾಗದ ರಾಸುಗಳಿಗೆ ಇಲಾಖೆಯಿಂದ ಲಸಿಕೆಯನ್ನು ಸಹ ನೀಡಲಾಗುತ್ತಿದ್ದು, ತಮ್ಮ ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.