ಜಿಲ್ಲೆ

ಲಸಿಕೆ ವಿತರಣೆಗೆ ಸಕಲ ಸಿದ್ಧತೆ

Gadag

ಗದಗ: ದೇಶಾದ್ಯಂತ ಜ. 16ರಿಂದ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ನಗರದ ಜಿಲ್ಲಾಡಳಿತ ಭವನದ ಆರೋಗ್ಯ ಇಲಾಖೆ ಕಚೇರಿಯಲ್ಲಿರುವ ಐಸ್ ಲೈನ್ಡ್ ರೆಫಿಜರೇಟರ್​ನಲ್ಲಿ (ಐಎಲ್​ಆರ್) 20 ಸಾವಿರ ಕೋವಿಡ್ ಲಸಿಕೆ ಇಡಬಹುದಾಗಿದೆ. ಜಿಲ್ಲೆಗೆ ಸದ್ಯ 18 ಸಾವಿರ ಕೋವಿಡ್ ಲಸಿಕೆ ಅವಶ್ಯಕತೆ ಇದೆ. ಇದಲ್ಲದೆ, ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ 48 ಲಸಿಕೆ ಕೇಂದ್ರಗಳಲ್ಲಿ ಐಎಲ್​ಆರ್​ಗಳಿದ್ದು, ಅಲ್ಲಿ ಸಹ ಲಸಿಕೆಗಳ ಶೇಖರಣೆಗೆ ಯಾವುದೇ ತೊಂದರೆ ಇಲ್ಲ. ಇದಲ್ಲದೆ, ಇನ್ನು 31 ಐಎಲ್​ಆರ್​ಗಳನ್ನು ಸರ್ಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಸಾರ್ವತ್ರಿಕವಾಗಿ ಲಸಿಕೆ ಹಾಕುವ ಕಾರ್ಯದಲ್ಲಿ ಇವುಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರೊನಾ ಸೋಂಕಿನ ವಿರುದ್ಧ ಕಾರ್ಯನಿರ್ವಹಿಸಿದ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಪೌರ ಕಾರ್ವಿುಕರು, ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 9 ಸಾವಿರ ಕರೊನಾ ಸೇನಾನಿಗಳಿಗೆ ಲಸಿಕೆ ಹಾಕಲಾಗುವುದು. ಜಿಲ್ಲೆಯ ಕರೊನಾ ಸೇನಾನಿಗಳ ಮಾಹಿತಿಯನ್ನು ಈಗಾಗಲೇ ಕೋವಿನ್ ಆಪ್​ನಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಸರದಿಯಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡಿ ನಂತರ ನಿಗಾ ಕೊಠಡಿಯಲ್ಲಿ ಇರಿಸಲಾಗುವುದು. ಲಸಿಕೆ ಹಾಕಿಸಿಕೊಂಡವರನ್ನು 30 ನಿಮಿಷಗಳ ಕಾಲ ನಿಗಾದಲ್ಲಿಟ್ಟು ಅವರ ಆರೋಗ್ಯ ಗಮನಿಸಲಾಗುತ್ತದೆ. ಈ ಸಮಯದಲ್ಲಿ ಲಸಿಕೆ ಪಡೆದುಕೊಂಡವರ ಆರೋಗ್ಯದಲ್ಲಿ ಏನಾದರೂ ಏರುಪೇರು ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಜಿಲ್ಲೆಯಲ್ಲಿ ಪ್ರತಿ ಲಸಿಕಾ ಕೇಂದ್ರಕ್ಕೆ ಒಬ್ಬ ಪೊಲೀಸ್ ಪೇದೆ, ಕಂದಾಯ ಇಲಾಖೆ ಸಿಬ್ಬಂದಿ (ಗ್ರಾಮ ಲೆಕ್ಕಾಧಿಕಾರಿ), ಇಬ್ಬರು ಮಹಿಳಾ ಆರೋಗ್ಯ ಸಹಾಯಕಿಯರು, ಒಬ್ಬ ಆಶಾ ಕಾರ್ಯಕರ್ತೆ ಸೇರಿದಂತೆ ಐವರ ತಂಡ ರಚಿಸಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಒಟ್ಟು 240 ಜನರು ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಕಳೆದ ಶುಕ್ರವಾರ ಗದಗ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ತಾಲೂಕು ಆಸ್ಪತ್ರೆ ನರಗುಂದ, ಸಮುದಾಯ ಆರೋಗ್ಯ ಕೇಂದ್ರ ಲಕ್ಷೆ್ಮೕಶ್ವರ, ರೋಣ ತಾಲೂಕಿನ ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುಂಡರಗಿ ತಾಲೂಕಿನ ಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯೋಜಿಸಿದ್ದ ಪ್ರಯೋಗಾರ್ಥ ಕಲ್ಪಿತ ಲಸಿಕೆ ಪರೀಕ್ಷೆಯಲ್ಲಿ ಲಸಿಕೆ ಸಾಗಣೆಯಿಂದ ಹಿಡಿದು ಅದನ್ನು ವ್ಯಕ್ತಿಗೆ ಹಾಕುವವರೆಗೆ ಪ್ರತಿ ಹಂತಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಯಾಗಿದೆ.

ಎಲ್ಲೆಲ್ಲಿ ಸಿಗಲಿದೆ ಕೋವಿಡ್ ಚುಚ್ಚುಮದ್ದು..?: ಗದಗ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಗದಗ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹುಯಿಲಗೋಳ, ಹುಲಕೋಟಿ, ಕದಡಿ, ಕಣವಿ, ಕುರ್ತಕೋಟಿ, ಲಕ್ಕುಂಡಿ, ಮುಳಗುಂದ, ನಾಗಾವಿ, ಹೊಂಬಳ, ಚಿಂಚಲಿ, ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಗದಗ.

ರೋಣ: ಪ್ರಾಥಮಿಕ ಆರೋಗ್ಯ ಕೇಂದ್ರ ಅಬ್ಬಿಗೇರಿ, ಹಿರೇಹಾಳ, ಹೊಳೆಆಲೂರ, ಮುಶಿಗೇರಿ, ನರೇಗಲ್, ನಿಡಗುಂದಿ, ಸವಡಿ, ಶಾಂತಗೇರಿ, ಸೂಡಿ, ಬೆಳವಣಕಿ, ಸಮುದಾಯ ಆರೋಗ್ಯ ಕೇಂದ್ರ ಗಜೇಂದ್ರಗಡ, ರೋಣ ತಾಲೂಕು ಆಸ್ಪತ್ರೆ.

ಮುಂಡರಗಿ: ಪ್ರಾಥಮಿಕ ಆರೋಗ್ಯ ಕೇಂದ್ರ ಬಾಗೇವಾಡಿ, ಡಂಬಳ, ಹಮ್ಮಗಿ, ಹಿರೇವಡ್ಡಟ್ಟಿ, ಜಂತ್ಲಿಶಿರೂರ, ಕದಾಂಪುರ, ಕಲಕೇರಿ, ಮುಂಡರಗಿ ತಾಲೂಕು ಆಸ್ಪತ್ರೆ.

ಶಿರಹಟ್ಟಿ: ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೂರಣಗಿ, ಯಳವತ್ತಿ, ಶಿಗ್ಲಿ, ಬೆಳ್ಳಟ್ಟಿ, ಹೆಬ್ಬಾಳ, ಬಾಲೇಹೊಸೂರ, ನಗರ ಆರೋಗ್ಯ ಕೇಂದ್ರ ಲಕ್ಷೆ್ಮೕಶ್ವರ. ನರಗುಂದ: ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೋಳ, ಜಗಾಪುರ, ಚಿಕ್ಕನರಗುಂದದಲ್ಲಿ ಲಸಿಕೆ ಕೇಂದ್ರ ಸ್ಥಾಪಿಸಲಾಗಿದೆ.

ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ವಿತರಣೆಗೆ ಬಾಗಲಕೋಟೆ ಪ್ರಾದೇಶಿಕ ಕೇಂದ್ರವಾಗಿದ್ದು, ಅಲ್ಲಿಂದ ಬೇರೆ ಜಿಲ್ಲೆಗಳಿಗೆ ಲಸಿಕೆ ಸರಬರಾಜು ಆಗಲಿದೆ. ಕೋಲ್ಡ್ ಸ್ಟೋರೇಜ್​ನಲ್ಲಿ ಲಸಿಕೆ ತಂದು ಶೇಖರಣೆ ಮಾಡಿಕೊಳ್ಳಲಾಗುವುದು. ಸದ್ಯಕ್ಕೆ ಜಿಲ್ಲೆಗೆ 18 ಸಾವಿರ ಕೋವಿಡ್ ಲಸಿಕೆ ಅವಶ್ಯಕತೆ ಇದೆ.| ಡಾ. ಆರ್.ಎಂ. ಗೊಜನೂರ, ಆರೋಗ್ಯಾಧಿಕಾರಿ ಹಾಗೂ ಕೋವಿಡ್ ಲಸಿಕೆ ಅಭಿಯಾನದ ಮುಖ್ಯಸ್ಥ, ಗದಗ