ಹನೂರು: ಗುಂಡ್ಲುಪೇಟೆ ತಾಲೂಕಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಎತ್ತಿನಗಾಡಿಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿ ಗುರುವಾರ ಹಿಂತಿರುಗುತ್ತಿದ್ದ ವೇಳೆ ತೀವ್ರ ಜ್ವರದಿಂದ ನಿತ್ರಾಣಗೊಂಡಿದ್ದ ಹಸುವಿಗೆ ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು ಅವರು ಸೂಕ್ತ ಚಿಕಿತ್ಸೆ ನೀಡಿದರು.
ಕಳೆದ ಮೂರು ದಿನಗಳ ಹಿಂದೆ ಗುಂಡ್ಲುಪೇಟೆಯಿಂದ ಸುಮಾರು 7ಕ್ಕೂ ಹೆಚ್ಚು ರೈತರು ಪ್ರತ್ಯೇಕ ಎತ್ತಿನಗಾಡಿಯಲ್ಲಿ ಮ.ಬೆಟ್ಟಕ್ಕೆ ಆಗಮಿಸಿದ್ದರು. ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು 2 ದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ 11ರ ವೇಳೆಯಲ್ಲಿ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಕೌದಳ್ಳಿ ಸಮೀಪದಲ್ಲಿ ಎತ್ತಿನಗಾಡಿಯ ಹಸುವೊಂದು ನಿತ್ರಾಣಗೊಂಡು ಕುಸಿದು ಬಿದ್ದಿತ್ತು. ಈ ವೇಳೆ ಪೊನ್ನಾಚಿ ಗ್ರಾಮದಿಂದ ವಾಪಸ್ಸಾಗುತ್ತಿದ್ದ ಪಶುಪಾಲನಾ ಇಲಾಖೆಯ ಡಾ.ಸಿದ್ದರಾಜು ಅವರು ಸ್ಥಳಕ್ಕಾಗಮಿಸಿದರು. ಈ ವೇಳೆ ಹಸುವನ್ನು ಪರೀಕ್ಷಿಸಿದಾಗ ತೀವ್ರ ಜ್ವರವಿರುವುದು ತಿಳಿದು ಕೂಡಲೇ ಚಿಕಿತ್ಸೆ ನೀಡಿದರು. ಚೇತರಿಸಿಕೊಂಡ ಬಳಿಕ ರೈತರು ಹಸುವನ್ನು ಗ್ರಾಮಕ್ಕೆ ಕರೆದೊಯ್ದರು.