ಜಿಲ್ಲೆ

ಚಿಕಿತ್ಸೆಯಲ್ಲಿ ತಾರತಮ್ಯ ಸಲ್ಲ - ವಿಜಯ ಅರಸ್

ಬೆಳಗಾವಿ: ಎಚ್‌ಐವಿ ಕಾಯಿಲೆಯಿಂದ ಬಳಲುತ್ತಿರುವ ಯಾವುದೇ ವ್ಯಕ್ತಿಯು ಚಿಕಿತ್ಸೆಯಿಂದ ವಂಚಿತರಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವ ಕಾರ್ಯದರ್ಶಿ ವಿಜಯ ದೇವರಾಜ ಅರಸ್ ಹೇಳಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಕ ಘಟಕದ ವತಿಯಿಂದ ನಗರದ ಬಿಮ್ಸ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದಡಿ ಎಲ್ಲರೂ ಸಮಾನರು. ಯಾರಿಗೂ ತಾರತಮ್ಯ ಆಗದಂತೆ ನೋಡಿಕೊಳ್ಳಲು ಅನೇಕ ಕಾನೂನು ಜಾರಿಗೆ ತರಲಾಗಿದೆ. ಹೀಗಾಗಿ ಈ ಮಾರಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಚಿಕಿತ್ಸೆಗೆ ತಾರತಮ್ಯ ಮಾಡಬಾರದು. ಏಡ್ಸ್ ಬಾರದಂತೆ ಮುನ್ನೆಚ್ಚರಿಕೆ ವಹಿಸಲು, ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಡಿ. 1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಶಶಿಕಾಂತ ಮುನ್ಯಾಳ ಮಾತನಾಡಿ, ಜಿಲ್ಲೆಯ 165 ಎಫ್‌ಐಸಿಟಿ ಕೇಂದ್ರಗಳಲ್ಲಿ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕು ಕಂಡುಬಂದರೆ ಸಮೀಪದ ಸಮಗ್ರ ಆಪ್ತ ಸಮಾಲೋಚನಾ ಕೇಂದ್ರಕ್ಕೆ ತೆರಳಲು ಸಲಹೆ ನೀಡಲಾಗುತ್ತಿದೆ. 2020 ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 50 ಎಚ್‌ಐವಿ ಸೋಂಕಿತ ಮಹಿಳೆಯರ ಹೆರಿಗೆಗಳಾಗಿದ್ದು, ಜನಿಸಿದ ಎಲ್ಲ 52 ಮಕ್ಕಳಿಗೆ ಎನ್‌ವಿಪಿ ಸಿರಪ್ ನೀಡಲಾಗಿದೆ ಎಂದರು.

ಬಿಮ್ಸ್ ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಬಾನು ಬಳ್ಳಾರಿ, ನೋಡಲ್ ಅಧಿಕಾರಿ ಗಿರಿಧರ ಪಾಟೀಲ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಅನಿಲ ಕೊರಬು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಉಪ ನಿರ್ದೇಶಕಿ ಡಾ.ಶೈಲಜಾ ತಮ್ಮಣ್ಣವರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್.ತುಕ್ಕಾರ್, ಡಾ.ಐ.ಪಿ.ಗಡಾದ, ಡಾ. ಕಿವಡಸಣ್ಣವರ ಇದ್ದರು.