ಯಲ್ಲಾಪುರ: ವಾಂತಿ-ಬೇಧಿ ಪ್ರಕರಣ ಕಾಣಿಸಿಕೊಂಡ ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ರಾಜೀವಾಡ ಹಾಗೂ ಮಜ್ಜಿಗೆಹಳ್ಳ ಗ್ರಾಮಸ್ಥರಿಗೆ ಗುರುವಾರವೂ ಚಿಕಿತ್ಸೆ ಮುಂದುವರಿದಿದೆ. ಗುರುವಾರ ಯಾವುದೇ ವಾಂತಿ-ಬೇಧಿ ಪ್ರಕರಣ ಕಂಡು ಬಂದಿಲ್ಲ.
ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮುಂದುವರಿಸಿದರು. ಅಲ್ಲದೆ, ಆರೋಗ್ಯದ ಕುರಿತಾಗಿ ಜಾಗೃತಿ ಮೂಡಿಸಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಅರ್ಚನಾ ನಾಯಕ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು. ಗ್ರಾಮಸ್ಥರು ಆರೋಗ್ಯದ ಕುರಿತು ಸರಿಯಾಗಿ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ತಾಪಂ ಇಒ ರಾಜೇಶ ಧನವಾಡಕರ, ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ, ಪಿಡಿಒ ರವಿ ಪಟಗಾರ, ಸಾಂಕ್ರಾಮಿಕ ರೋಗ ತಜ್ಞರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.