ಶಿಗ್ಗಾಂವಿ: ನಗರ ಸ್ವಚ್ಛತೆಗೆ ಪೌರ ಕಾರ್ವಿುಕರ ಸೇವೆ ಅನನ್ಯವಾದುದು. ಸ್ವಚ್ಛತಾ ಸೇನಾನಿಗಳು ತಮ್ಮ ಆರೋಗ್ಯ ಬದಿಯಿಟ್ಟು ಸಮಾಜದ ಆರೋಗ್ಯಕ್ಕೆ ಸದಾ ಕಂಕಣಬದ್ಧರಾಗಿರುವ ಪೌರ ಕಾರ್ವಿುಕರನ್ನು ಗೌರವಯುತವಾಗಿ ಕಾಣಬೇಕು ಎಂದು ಪುರಸಭೆ ಸದಸ್ಯ ಸುಭಾಸ ಚೌಹಾಣ ಹೇಳಿದರು.
ಪೌರ ಕಾರ್ವಿುಕರ ದಿನಾಚರಣೆ ಅಂಗವಾಗಿ ಪುರಸಭೆ ಆವರಣದಲ್ಲಿ ಪುರಸಭೆ ಕಾರ್ಯಾಲಯದಿಂದ ಸೋಮವಾರ ಆಯೋಜಿಸಿದ್ದ ಪೌರ ಕಾರ್ವಿುಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರ ಆರೋಗ್ಯ ಕಾಪಾಡುವ ಸೈನಿಕರಾಗಿರುವ ಪೌರ ಕಾರ್ವಿುಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು ಮತ್ತು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. ಸದಸ್ಯ ಪರಶುರಾಮ ಸೊನ್ನದ ಮಾತನಾಡಿ, ಪೌರ ಕಾರ್ವಿುಕರು ದುಶ್ಚಟಗಳಿಂದ ಹೊರಬಂದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕಟಿಬದ್ಧ್ದಾಗಬೇಕು ಎಂದರು.
ನಿವೃತ್ತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ.ಎಚ್. ಮಾತನಾಡಿ, ಪೌರ ಕಾರ್ವಿುಕರು ತಮ್ಮ ಆರೋಗ್ಯದ ಮುನ್ನೆಚ್ಚರಿಕೆಯಾಗಿ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪೌರ ಕಾರ್ವಿುಕರು, ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡು ಖುಷಿಪಟ್ಟರು. ಬಳಿಕ ಪುರಸಭೆ ಆವರಣದಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಉಪಾಧ್ಯಕ್ಷೆ ಶಾಂತಾಬಾಯಿ ಸುಬೇದಾರ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುರಾಧಾ ಮಾಳವದೆ, ಸದಸ್ಯರಾದ ರೂಪಾ ಬನ್ನಿಕೊಪ್ಪ, ಸಂಗೀತಾ ವಾಲ್ಮೀಕಿ, ವಸಂತಾ ಬಾಗೂರ, ಜಾಫರ ಪಠಾಣ, ಗೌಸಖಾನ್ ಮುನಸಿ, ಮಂಜುನಾಥ ಬ್ಯಾಹಟ್ಟಿ, ಮುಖ್ಯಾಧಿಕಾರಿ ಮಲ್ಲೇಶ ಆರ್., ವಿ.ಎಸ್. ಪಾಟೀಲ, ಮಂಗಳಗೌರಿ ಪಾಟೀಲ, ರೂಪಾ ನಾಯ್ಕ, ಗಿರಿಜಮ್ಮಾ ಕಮಡೊಳ್ಳಿ, ಇತರರಿದ್ದರು.