ಭಟ್ಕಳ: ರೋಗಿಗಳಿಗೆ ವೈದ್ಯರು ಸರಿಯಾಗಿ ಸ್ಪಂದಿಸಬೇಕು. ಇಲ್ಲಿ ಬರುವ ರೋಗಿಗಳಿಗೆ ಔಷಧಿಗಾಗಿ ಚೀಟಿ ನೀಡಬೇಡಿ. ಬದಲಿಗೆ ಉತ್ತಮ ಚಿಕಿತ್ಸೆ ನೀಡಿ ಎಂದು ಮೀನುಗಾರಿಕೆ ಹಾಗೂ ಬಂದರು ಒಳನಾಡು ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ನಂತರ ವೈದ್ಯರು ಹಾಗೂ ಸಿಬ್ಬಂದಿ ಜತೆ ಮಾತನಾಡಿದರು.
ಭಟ್ಕಳ ಆಸ್ಪತ್ರೆ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಮಾದರಿ ಆಸ್ಪತ್ರೆ. ಇಲ್ಲಿ ಚಿಕಿತ್ಸೆ ಸಿಗುತ್ತದೆ ಎಂದು ರೋಗಿಗಳು ಬರುತ್ತಾರೆ. ಅಂಥವರಿಗೆ ನಿರಾಸೆ ಮಾಡಬೇಡಿ. ಮುಂದಿನ ದಿನಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸರಿಹೊಂದುವಂತಹ ಕಟ್ಟಡ ಹಾಗೂ ಸೌಲಭ್ಯ ಒದಗಿಸಿಸಲಾಗುವುದು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣ ಘಟಕದಲ್ಲಿ ಸಿಬ್ಬಂದಿ ಇರದ ಕಾರಣ ರಕ್ತದ ದಾಸ್ತಾನು ಇಡುವುದಿಲ್ಲ. ಇದರಿಂದ ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಜನರು ಉಡುಪಿ, ಕುಂದಾಪುರಕ್ಕೆ ಧಾವಿಸುತ್ತಿದ್ದಾರೆ ಎಂದರು.
ಆಸ್ಪತ್ರೆಯಲ್ಲಿ ಪೊಲೀಸ್ ಔಟ್ ಪೋಸ್ಟ್ ನಿರ್ಮಿಸುವಂತೆ ವೈದ್ಯಾಧಿಕಾರಿ ಸವಿತಾ ಕಾಮತ ಕೋರಿದ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ನಾಳೆಯಿಂದಲೆ ಪ್ರತಿ 8 ಗಂಟೆಗೊಮ್ಮೆಯಂತೆ 3 ಸಿಬ್ಬಂದಿ ನೇಮಿಸುವಂತೆ ಡಿವೈಎಸ್ಪಿ ಶ್ರೀಕಾಂತ ಅವರಿಗೆ ಸೂಚಿಸಿದರು.
ಆಯುಷ್ಮಾನ ಯೋಜನೆಯಡಿ ಚಿಕಿತ್ಸೆ ಪಡೆಯಲು ರೆಫರಲ್‌ಲೆಟರ್‌ಗಾಗಿ ಜಿಲ್ಲಾಸ್ಪತ್ರೆಗೆ ಧಾವಿಸಬೇಕಾಗಿದ್ದು, ಅದನ್ನು ಇಲ್ಲಿನ ಆಸ್ಪತ್ರೆಯಲ್ಲಿಯೇ ವ್ಯವಸ್ಥೆ ಮಾಡುವಂತೆ ರವಿಕಿರಣ ರೇವಣಕರ ವಿನಂತಿಸಿದರು.
ಶಿರಾಲಿ ಸಮುದಾಯ ಆಸ್ಪತ್ರೆ ಮೇಲ್ಛಾವಣಿ ಸೋರಿಕೆಯ ಬಗ್ಗೆ ವೈದ್ಯ ಬಾಲಚಂದ್ರ ಮೇಸ್ತ ಸಚಿವರ ಗಮನಕ್ಕೆ ತಂದಾಗ ತಕ್ಷಣ ಶೀಟ್ ಅಳವಡಿಸಿ ಕಾಮಗಾರಿ ಪೂರ್ಣ ಮಾಡುವಂತೆ ತಾ.ಪಂ. ಇ.ಒ ಪ್ರಭಾಕರ ಚಿಕ್ಕನಮನೆಗೆ ಸಚಿವರು ಸೂಚಿಸಿದರು.
ಮುರ್ಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ನೀರಿನ ಅಭಾವ ಇರುವ ಬಗ್ಗೆ ವೈದ್ಯ ಪ್ರಿಯಾ ಸಚಿವರ ಗಮನಕ್ಕೆ ತಂದಾಗ ಮಳೆ ಬರುವ ಪೂರ್ವದಲ್ಲಿ ಬೋರ್‌ವೆಲ್ ಕೊರೆಸುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗೆ ಸೂಚಿಸಿದರು.
ಬೈಲೂರು, ಮುರ್ಡೇಶ್ವರ, ಬೆಳ್ಕೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಅದನ್ನು ಬಗೆಹರಿಸುವಂತೆ ಸಾರ್ವಜನಿಕರು ಈ ಸಂದರ್ಭದಲ್ಲಿ ಸಚಿವರನ್ನು ಆಗ್ರಹಿಸಿದರು.
ಆದ್ಯತೆಯ ಮೇರೆಗೆ ಹಂತ ಹಂತವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದ ಸಚಿವರು ವೈದ್ಯರು ವರ್ಗಾವಣೆ ತೆಗೆದುಕೊಳ್ಳದೇ ಇರುವ ಕಡೆ ರೋಗಿಗಳಿಗೆ ಚೆನ್ನಾಗಿ ಉಪಚರಿಸುವಂತೆ ಸಲಹೆ ನೀಡಿದರು. ತಹಸೀಲ್ದಾರ್ ತಿಪ್ಪೆಸ್ವಾಮಿ, ಡಿವೈಎಸ್ಪಿ ಶ್ರೀಕಾಂತ ಕೆ., ಡಾ. ಸತೀಶ ಬಿ ಇದ್ದರು.
ಎಂಡೋಸಲ್ಫಾನ್ ಪೀಡಿತರಿಗೆ ಗಾಲಿ ಕುರ್ಚಿ, ಸೊಳ್ಳೆ ಪರದೆ ನೀಡಿ ಮಾತನಾಡಿದ ಸಚಿವರು, ಎಂಡೋಸಲ್ಫಾನ್ ಪೀಡಿತರಿಗೆ ನನ್ನ ಅವಧಿಯಲ್ಲಿ ಮಾಸಿಕ ವೇತನ, ಸರ್ಕಾರಿ ಸವಲತ್ತು ಸಿಗುವಂತೆ ಕ್ರಮವಹಿಸಿದ್ದೆ. ಅವರ ಚಿಕಿತ್ಸೆ ಹಾಗೂ ಪಾಲನೆಗಾಗಿ ಭಟ್ಕಳದಲ್ಲಿ ಒಂದು ಪ್ರತ್ಯೇಕ ಆಸ್ಪತ್ರೆ ತೆರೆಯಲು ಅಂದೇ ಆಗ್ರಹಿಸಿ ಯೋಜನೆ ರೂಪಿಸಿದ್ದೆ. ಆದರೆ, ಇಲ್ಲಿಯ ತನಕ ಯೋಜನೆ ಜಾರಿಯಾಗದಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.