ವಿಜಯವಾಣಿ ಸುದ್ದಿಜಾಲ ಧಾರವಾಡ
ಹನ್ನೆರಡನೇ ಶತಮಾನಕ್ಕೂ, 21ನೇ ಶತಮಾನಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ಇಂದು ಜಾತಿಯ ರೋಗ ಎಲ್ಲೆಡೆ ಪಸರಿಸುತ್ತ ಸಾಗಿದೆ. ಇಂದಿನ ದಿನಗಳಲ್ಲಿ ಮನುಷ್ಯನಿಗಿಂತ ಜಾತಿಗೆ ಹೆಚ್ಚು ಬೆಲೆ ಇದೆ. ಬಸವಣ್ಣನವರು ಸಂಸ್ಕಾರ, ಸದ್ವಿಚಾರ, ಆಧ್ಯಾತ್ಮ, ನಡೆನುಡಿ, ಸದಾಚಾರ, ಸಮಾನತೆ ಪರಿಕಲ್ಪನೆ ಕೊಟ್ಟು ಸಮಾಜದ ಉದ್ಧಾರಕ್ಕೆ ಕೆಲಸ ಮಾಡಿದ್ದರು. ಅದನ್ನು ನಾವು ಮುನ್ನಡೆಸಿಕೊಂಡು ಹೋಗಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಸವಶಾಂತಿ ಮಿಶನ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ವಚನ ಪಿತಾಮಹ ಡಾ. .ಗು. ಹಳಕಟ್ಟಿ ಜನ್ಮದಿನೋತ್ಸವ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಸನ್ಮಾರ್ಗದ ಬದಲು ದುರ್ಮಾರ್ಗ ಹಿಡಿಯುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿ, ಧರ್ಮ ನಾಶದತ್ತ ಸಾಗುವುದು ನಿಶ್ಚಿತ. ಹೀಗಾಗಿ ತಂದೆ-ತಾಯಿ ಎಚ್ಚೆತ್ತು ಮಕ್ಕಳಿಗೆ ಆಧ್ಯಾತ್ಮ, ಧರ್ಮ, ಸದ್ವಿಚಾರ, ಉತ್ತಮ ಸಂಸ್ಕಾರ ಕೊಟ್ಟರೆ ಮಾತ್ರ ಮುಂದಿನ ದಿನದಲ್ಲಿ ಮಕ್ಕಳು ಪಾಲಕರನ್ನು ಪೋಷಣೆ ಮಾಡಲು ಸಾಧ್ಯ ಎಂದರು.
ಸಂಶೋಧಕ ಡಾ. ವೀರಣ್ಣ ರಾಜೂರ ಮಾತನಾಡಿ, ಸಮಾಜ, ದೇಶದ ಅಭಿವೃದ್ಧಿಗೆ ಬಸವಾದಿ ಶರಣರು ವಚನ ಸಾಹಿತ್ಯ ನೀಡಿದ್ದಾರೆ. ಕಲ್ಯಾಣ ಕ್ರಾಂತಿ ನಂತರ ದುಷ್ಟ ಶಕ್ತಿಗಳು ವಚನ ಸಾಹಿತ್ಯ ನಾಶಪಡಿಸಲು ಪ್ರಯತ್ನಿಸಿದಾಗ ಅದನ್ನು ಉಳಿಸಿಕೊಳ್ಳಲು ಶರಣರು ತಮ್ಮ ಪ್ರಾಣ ತೆತ್ತರು. ನಂತರ ಹಳಕಟ್ಟಿ ಅವರು ವಚನಗಳನ್ನು ರಕ್ಷಿಸಿ ಪ್ರಕಟಿಸಿ ಮತ್ತೆ ಸಮಾಜಕ್ಕೆ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಸ್ಮರಿಸುವುದರ ಜತೆಗೆ ಅವರ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದರು.
ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಬಸವಶಾಂತಿ ಮಿಶನ್ ಟ್ರಸ್ಟ್ ಅಧ್ಯಕ್ಷ ಮಹಾದೇವ ಹೊರಟ್ಟಿ, ಡಾ. ಶಂಭುಲಿಂಗ ಹೆಗಡಾಳ, ಸಾಹಿತಿ ರಂಜಾನ ದರ್ಗಾ, ಶಶಿಕಾಂತ ಪಟ್ಟಣ, ಪ್ರೊ. ಐ.ಜಿ. ಸನದಿ, ಸಿದ್ದರಾಮಣ್ಣ ನಡಕಟ್ಟಿ, ಎಂ.ವಿ. ಗೊಂಗಡಶೆಟ್ಟಿ, ಸಿ.ಎಂ. ಕುಂದಗೋಳ, ಶರಣಪ್ಪ ಕೊಟಗಿ, ಬಸವಂತ ತೋಟದ, ಸುಧಾ ಕಬ್ಬೂರ, ಡಾ. ವೀಣಾ ಬಿರಾದಾರ, ಇತರರು ಇದ್ದರು.