ನರಗುಂದ: ರೈತರ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯದಲ್ಲಿ ಏರು-ಪೇರಾದರೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ಕೊಡಿಸುವುದರ ಮೂಲಕ ಅವುಗಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ಪಶುಸಂಗೋಪನೆ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಸಂತೋಷ ಕರೆಭರಮನ್ನವರ ಹೇಳಿದರು.
ತಾಲೂಕಿನ ಸುರಕೋಡ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುಸಂಗೋಪನೆ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಜಾನುವಾರುಗಳ ಆರೋಗ್ಯ ತಪಾಸಣೆ, ಬರಡು ರಾಸುಗಳ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಸುಗಳ ಪುನರಾವರ್ತಿತ ಬೆದೆಯಿಂದಾಗಿ ರೈತರು ತಮ್ಮ ಜಾನುವಾರುಗಳ ಮಾರಾಟ ಮಾಡುವ ಸಂಕಷ್ಟದಲ್ಲಿದ್ದಾರೆ. ಈ ಸಮಸ್ಯೆ ಇಲಾಖೆಗೆ ಬಿಡಿಸಲಾಗದ ಕಗ್ಗಂಟಾಗಿದ್ದು, ಇದನ್ನು ಸಂಪೂರ್ಣ ತಡೆಗಟ್ಟುವ ಸಲುವಾಗಿ ಉತ್ಕೃಷ್ಟ ಗುಣಮಟ್ದದ ವೀರ್ಯ ನಳಿಕೆಗಳನ್ನು ಪಶುವೈದ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಸಂಪೂರ್ಣ ಹತೋಟಿಗೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ 150 ಜಾನುವಾರುಗಳು ಭಾಗವಹಿಸಿದ್ದವು. ಈ ಪೈಕಿ 80 ಜಾನುವಾರುಗಳಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಲಾಯಿತು. 70 ಬರಡು ಜಾನುವಾರುಗಳಿಗೆ ಬಂಜೆತನ ನಿವಾರಣೆ ಚಿಕಿತ್ಸೆ, ಪುನರಾವರ್ತಿತ ಬೆದೆ ಸಮಸ್ಯೆ, ಬೆದೆಗೆ ಬಾರದೆ ಇರುವ ಜಾನುವಾರುಗಳಿಗೆ ಚಿಕಿತ್ಸೆ, ಜಂತು ನಿವಾರಣೆ ಔಷಧ ನೀಡಲಾಯಿತು.
ಗ್ರಾಪಂ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಉಪಾಧ್ಯಕ್ಷೆ ಮಂಜುಳಾ ತಳವಾರ, ಗ್ರಾಪಂ ಸದಸ್ಯರಾದ ದೇವಕ್ಕ ಮಾದರ, ಪುಷ್ಪಾ ಪಿಡ್ಡನ್ನವರ, ಮಲ್ಲರಡ್ಡಿ ಅಜರಡ್ಡಿ, ಗುರವ್ವ ಮಜ್ಜಗಿ, ಪ್ರಕಾಶ ಕುಲಕರ್ಣಿ, ಶಿವನಗೌಡ ರಾಯನಗೌಡ್ರ, ಪಶು ಆಸ್ಪತ್ರೆಯ ಎಸ್.ಎಸ್. ರೋಣದ, ಸಂಜೀವಿನ ಕಾರ್ಯಕ್ರಮ ತಾಪಂ ಘಟಕಾಧಿಕಾರಿ ಮೋಹನ ಕೃಷ್ಣಾ, ಲಕ್ಷ್ಮೀ ಮುತ್ತನ್ನವರ, ಚಂದ್ರು ರಾಹುತರ, ಶೇಖಪ್ಪ ನಾವಿ, ಬಸವರಾಜ ಹಿರೇಮಠ, ನಾಗರಾಜ ಸೋಮಣ್ಣವರ, ಮಹಾಂತೇಶ ಮಾದಪ್ಪನವರ, ಪಶುವೈದ್ಯ ಕಿರಿಯ ಪರೀಕ್ಷಕ ನಾಗಭೂಷಣ ಜಾಧವ, ಗ್ರಾಮಸ್ಥರು ಉಪಸ್ಥಿತರಿದ್ದರು.