ಜಿಲ್ಲೆ

ಗುಬ್ಬಿಯಲ್ಲಿ ಯುವ ಸೇನಾನಿಗಳ ಓಡಾಟ ; ಮೀಸಲಾತಿ ಕೈಕೊಟ್ಟ ಹಿನ್ನೆಲೆ ಕೆಲವರ ಕನಸು ಭಗ್ನ

Tumakuru

ಗುಬ್ಬಿ: ಗರಿಗೆದರಿದ ಗ್ರಾಪಂ ಚುನಾವಣೆಯಲ್ಲೀಗ ಯುವ ಸೇನಾನಿಗಳ ಆರ್ಭಟ ಜೋರಾಗಿದೆ. ಯುವಪಡೆ ಕ್ಷೇತ್ರ ಪ್ರವಾಸ ನಡೆಸಿದ್ದರೆ, ಕೆಲ ಕ್ಷೇತ್ರಗಳಲ್ಲಿ ಮೀಸಲಾತಿ ಕೈಕೊಟ್ಟಿರುವ ಹಿನ್ನೆಲೆ ಕೆಲವರ ಕನಸು ಭಗ್ನಗೊಂಡಿದೆ.

ಪಕ್ಷಾತೀತ ಚುನಾವಣೆ ಎನಿಸಿದರೂ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಮುಂಬರುವ ತಾಪಂ, ಜಿಪಂ ಚುನಾವಣೆಗೆ ತಳಪಾಯವೆಂಬ ಕಾರಣಕ್ಕೆ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಸಮರ್ಥ ಅಭ್ಯರ್ಥಿ ಆಯ್ಕೆಯಲ್ಲಿ ತೊಡಗಿದ್ದಾರೆ. ಅಧಿಕಾರ ಹಿಡಿಯಲು ಮೂರು ಪಕ್ಷಗಳಲ್ಲೂ ರಾಜಕೀಯ ಲೆಕ್ಕಾಚಾರ ನಡೆದಿದೆ.

ತಾಲೂಕಿನ 34 ಗ್ರಾಪಂಗಳ ಪೈಕಿ 7 ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿಕೊಂಡಿದೆ. ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಅಳೆದು ತೂಗಿ, ಜಾತಿ ಲೆಕ್ಕಾಚಾರ, ಪಕ್ಷನಿಷ್ಠರನ್ನು ಪರಿಗಣಿಸಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದ್ದಾರೆ.

ಬಿಜೆಪಿ ಯಾವುದೇ ಗೊಂದಲ ಮೂಡದಂತೆ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತುಕೊಡುವ ಜತೆಗೆ ಸಮರ್ಥರನ್ನು ಆಯ್ಕೆ ಮಾಡುವಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಲೆಯಲ್ಲಿ ಪಕ್ಷ ಸದೃಢಗೊಳಿಸಲು ಕಾಂಗ್ರೆಸ್ ಕೂಡಾ ಕಾರ್ಯಕರ್ತರಲ್ಲಿ ಸೂಕ್ತರಿಗಾಗಿ ಹುಡುಕಾಟ ನಡೆಸಿದೆ. ಬಿಜೆಪಿಯಲ್ಲಿ ಎಸ್.ಡಿ.ದಿಲೀಪ್ ಕುಮಾರ್ ಕೂಡ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳುವ ಮೂಲಕ ವಿಧಾನಸಭೆ ಚುನಾವಣೆಗೆ ಪಿಚ್ ಸಿದ್ಧಗೊಳಿಸಿಕೊಳ್ಳಲು ಮುಂದಾಗಿದ್ದಾರೆ.

ಮೀಸಲಾತಿ ಪಟ್ಟಿ ಹೊರ ಬಂದ ಬೆನ್ನಲ್ಲೇ ಹಲವು ಗ್ರಾಪಂಗಳಲ್ಲಿ ಗೊಂದಲಗಳು ಮೂಡಿವೆ. ಎಲ್ಲ ವರ್ಗಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬದಲಾದ ಮೀಸಲಾತಿ ಕ್ಷೇತ್ರಗಳಲ್ಲಿ ಸಂಬಂಧಪಟ್ಟ ಅಭ್ಯರ್ಥಿ ಆಯ್ಕೆ ಕೂಡಾ ಕ್ಲಿಷ್ಟ ಎನಿಸಿದೆ. ಶ್ರೀನಿವಾಸ್ ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿತ, ನಿಷ್ಠರನ್ನು ಗೆಲ್ಲಿಸಿಕೊಳ್ಳಲು ಎಲ್ಲ ರೀತಿಯ ನೆರವು ನೀಡುತ್ತಿರುವುದು ಕಂಡುಬಂದಿದೆ. ಕಾಂಗ್ರೆಸ್‌ನಲ್ಲಿ ಅಷ್ಟು ಹುರುಪು ಕಾಣುತ್ತಿಲ್ಲ. ಹೊನ್ನಗಿರಿಗೌಡಗೆ ಪೂರ್ಣ ಜವಾಬ್ದಾರಿ ವಹಿಸದೇ ಇದ್ದು, ಅವರೂ ತಮ್ಮ ನಿಷ್ಠರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಮುಂದಿನ ಚುನಾವಣೆಗಳಿಗೆ ಬುನಾದಿ ಹಾಕುವ ಗ್ರಾಮ ಚುನಾವಣೆ 3 ಪಕ್ಷದ ಬಲಾಬಲ ಪ್ರದರ್ಶನವಾದರೆ, ಮತ್ತೊಂದಡೆ 2ನೇ ಹಂತದ ಮುಖಂಡರ ಪ್ರತಿಷ್ಠೆಯ ಕಣವಾಗಿ ಬಿಂಬಿತವಾಗುತ್ತಿದೆ. ಜಾತಿ ಮತಗಳ ಲೆಕ್ಕಾಚಾರ ಕೂಡಾ ಮುನ್ನೆಲೆ ಪಡೆದುಕೊಂಡಿದೆ.

ಅವಿರೋಧ ಆಯ್ಕೆಗೆ ಒತ್ತು:ಹಳ್ಳಿ ಫೈಟ್‌ನಿಂದ ಗುಂಪುಗಾರಿಕೆ ಸೃಷ್ಟಿಯಾಗುವುದನ್ನು ಮನಗಂಡ ಗ್ರಾಮದ ಹಿರಿಯರು ಸಭೆ ನಡೆಸಿ ಅವಿರೋಧ ಆಯ್ಕೆಗೆ ಒತ್ತುಕೊಟ್ಟಿರುವುದು ಈ ಹಿಂದೆ ನಡೆದಿದೆ. ಈ ಬಾರಿ ಸಾಕಷ್ಟು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಸಾಧ್ಯತೆ ಕಾಣಿಸಿದೆ. ದೇವಾಲಯಗಳ ಜೀರ್ಣೋದ್ಧಾರ, ಕೊಳವೆಬಾವಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹೀಗೆ ಹಲವು ಕಾರ್ಯಗಳನ್ನು ಮಾಡಿಸುವಂತೆ ತಾಕೀತು ಮಾಡಿ ಅವಿರೋಧ ಆಯ್ಕೆಗೆ ವೇದಿಕೆ ಸಿದ್ಧಪಡಿಸುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ.

ಗ್ರಾಪಂ ಚುನಾವಣೆ ಬಹಿಷ್ಕಾರ ಬಿಸಿ!:ಎಂ.ಎನ್.ಕೋಟೆ: ಗುಬ್ಬಿ ತಾಲೂಕಿನ ಮಠದಹಳ್ಳ ಕೆರೆ, ಶೇಷೇನಹಳ್ಳಿ ಹಾಗೂ ಕುರುಬರಹಳ್ಳಿ ಕೆರೆಗೆ 20 ವರ್ಷಗಳಿಂದ ಹೇಮೆ ಹರಿಸುವ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆಯನ್ನು ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿಯ ಒಟ್ಟು 33 ಗ್ರಾಮಗಳ ಮತದಾರರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಭಾನುವಾರ ಸಭೆ ನಡೆಸಿ ಗ್ರಾಮಸ್ಥರನ್ನು ಮನವೊಲಿಸಲು ಮುಂದಾದ ತಾಲೂಕು ಆಡಳಿತದ ಪ್ರಯತ್ನ ವಿಫಲವಾಗಿದೆ.

ಡಾಬಾ, ಹೋಟೆಲ್‌ಗಳು ಹೌಸ್‌ುಲ್: ದಾಯಾದಿಗಳ ಕಲಹಕ್ಕೆ ನಾಂದಿ ಹಾಡುವ ಗಾಪಂ ಚುನಾವಣೆಯು ಹಳೇ ವೈಷಮ್ಯಕ್ಕೆ ಮೂಲವಾಗಲಿದೆ. ದ್ವೇಷ ಅಸೂಯೆಗಳ ತಾಣವಾಗಿ ಸಹೋದರರ ಸವಾಲ್‌ಗಳನ್ನೂ ಈ ಅಖಾಡದಲ್ಲಿ ನೋಡಬಹುದಾಗಿದೆ. ಅಭ್ಯರ್ಥಿಗಳನ್ನು ಸೋಲಿಸಲು ಹೆಣೆಯುವ ತಂತ್ರಗಳು ಡಾಬಾ, ಹೋಟೆಲ್‌ಗಳಲ್ಲಿ ಸಿದ್ಧವಾಗುತ್ತವೆ. ಈ ಹಿನ್ನೆಲೆ ತಾಲೂಕಿನ ಬಹುತೇಕ ಡಾಬಾಗಳು ಸಂಜೆ ನಂತರ ಹೌಸ್‌ಫುಲ್. ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆ ತೋಟದ ಮನೆಗಳು ಚುನಾವಣಾ ತಂತ್ರಕ್ಕೆ ಸಾಕ್ಷಿಯಾಗಲಿವೆ.