ಬೇಲೂರು: ತಾಲೂಕಿನ ಮುರೇಹಳ್ಳಿ ಗ್ರಾಮದಲ್ಲಿ ಕರು ಹಾಗೂ ಜಿಂಕೆಯನ್ನು ತಿಂದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಇರಿಸಿ ಕಾಯಲಾಗುತ್ತಿದೆ.
ನಾಲ್ಕು ದಿನಗಳ ಹಿಂದೆ ಕರು ಹಾಗೂ ಎರಡು ದಿನಗಳ ಹಿಂದೆ ಜಿಂಕೆಯನ್ನು ತಿಂದಿರುವ ಚಿರತೆ ಎಲ್ಲಿ, ಯಾವ ಸಮಯದಲ್ಲಿ ಪ್ರತ್ಯಕ್ಷವಾಗುವುದೋ ಎಂಬ ಆತಂಕದಲ್ಲಿ ಇರುವ ಗ್ರಾಮಸ್ಥರು, ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮುರೇಹಳ್ಳಿ ಗ್ರಾಮದ ಯುವರಾಜೇಗೌಡ ಎಂಬುವರ ಕಾಫಿ ತೋಟದಲ್ಲಿ ಬೋನು ಇಡಲಾಗಿದೆ.
ಉಪ ವಲಯ ಅರಣ್ಯಾಧಿಕಾರಿ ಗುರುರಾಜ್, ವನ ರಕ್ಷಕರಾದ ಮಧುಕುಮಾರ್, ರಘು ಮತ್ತು ಗ್ರಾಮಸ್ಥರು ಸ್ಥಳದಲ್ಲಿದ್ದರು.