ಜಿಲ್ಲೆ

ಬೆಳ್ಳಾವರ ಗ್ರಾಮಕ್ಕೆ ಸಾರಿಗೆ ಸೌಲಭ್ಯ

ಲೋಕೇಶ್ ಮನು. ಡಿ

ಬೇಲೂರು: ಸಾರಿಗೆ ಸೌಲಭ್ಯದಿಂದ ವಂಚಿತವಾಗಿದ್ದ ಬೆಳ್ಳಾವರ ಗ್ರಾಮಕ್ಕೆ ಬುಧವಾರ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಸ್ ಸೌಲಭ್ಯ ಕಲ್ಪಿಸಿದ್ದು, ಗ್ರಾಮಕ್ಕೆ ಆಗಮಿಸಿದ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಸ್ವಾಗತಿಸಿದರು.


ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಪಂ ವ್ಯಾಪ್ತಿಯ ಬೆಳ್ಳಾವರ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವಂತಾಗಿತ್ತು. ಈ ಕುರಿತು ‘ಬಸ್ ಸೌಲಭ್ಯ ಇಲ್ಲದೆ ಪರದಾಟ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ಸೆ.9ರಂದು ಪ್ರಕಟವಾದ ವರದಿಗೆ ಎಚ್ಚೆತ್ತ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬುಧವಾರ ಸಾರಿಗೆ ಸೌಲಭ್ಯ ಕಲ್ಪಿಸಿದ್ದಾರೆ.


ದಶಕಗಳಿಂದ ಬೆಳ್ಳಾವರ ಗ್ರಾಮಕ್ಕೆ ಬಸ್ ವ್ಯವಸ್ಥೆ ಇರದ ಕಾರಣ ವೃದ್ಧರು, ರೋಗಿಗಳು, ಮಹಿಳೆಯರು, ವಿದ್ಯಾರ್ಥಿಗಳು ಪಟ್ಟಣಕ್ಕೆ ಬರಲು 4 ಕಿಮೀ ದೂರ ನಡೆಯಬೇಕಿತ್ತು ಅಥವಾ ಖಾಸಗಿ ವಾಹನಕ್ಕೆ ಕೇಳಿದಷ್ಟು ಹಣ ತೆತ್ತು ತೆರಳಬೇಕಿತ್ತು. ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವಿಭಾಗದ ಸಕಲೇಶಪುರ ಹಾಗೂ ಬೇಲೂರು ಡಿಪೋ ಅಧಿಕಾರಿಗಳು ಬೆಳ್ಳಾವರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ಬೆಳ್ಳಾವರ ಗ್ರಾಮಸ್ಥರು ಸೇರಿದಂತೆ ಇತರ ಗ್ರಾಮಗಳ ಗ್ರಾಮಸ್ಥರೂ ಸಂತಸಗೊಂಡಿದ್ದಾರೆ.


ಸಕಲೇಶಪುರ ಡೀಪೋದಿಂದ ಬೆಳ್ಳಾವರ ಗ್ರಾಮಕ್ಕೆ ಬಸ್ ಬಿಡಲಾಗಿದೆ. ಸಕಲೇಶಪುರದಿಂದ ಬೆಳಗ್ಗೆ ಬೇಲೂರಿಗೆ ಬರುವ ಬಸ್ಸು ತೊಳಲು ಮಾರ್ಗವಾಗಿ ಬೆಳ್ಳಾವರ ತಲುಪಿ ಆದೇ ಮಾರ್ಗ ವಾಪಸಾಗಲಿದೆ. ಸಂಜೆಯೂ ಇದೇ ಬಸ್ ಬೆಳ್ಳಾವರ ಗ್ರಾಮಕ್ಕೆ ಬಂದು, ವಾಪಸಾಗಲಿದೆ.