ಬೆಳಗಾವಿ: ವೇತನ ಪರಿಷ್ಕರಣೆ, ತುಟ್ಟಿ ಭತ್ಯೆ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆ.5ರಿಂದ ಅರ್ನಿದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ನೌಕರರ ಸಂದ ಜಂಟಿ ಕ್ರಿಯಾ ಸಮಿತಿ ಸಂಚಾಲಕ ನಾಗೇಶ ಸಾತೇರಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಬೇಡಿಕೆ ಈಡೇರಿಸಲು ಬದಲು ಮುಷ್ಕರ ತಡೆಯಲು ಎಸ್ಮಾ ಜಾರಿ ಬೆದರಿಕೆ ಹಾಕುತ್ತಿದೆ. ಇದಕ್ಕೆಲ್ಲ ಹೆದರುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಮುಷ್ಕರ ನಡೆಯಲಿದೆ ಎಂದು ತಿಳಿಸಿದರು.
ಸರ್ಕಾರವು 2020ರಲ್ಲಿ ಶೇ.15ರಷ್ಟು ವೇತನ ಪರಿಷ್ಕರಣೆ ಮಾಡಿದೆ. ಆದರೆ, 38 ತಿಂಗಳಿಂದ ಬಾಕಿ ಹಣ ಬಿಡುಗಡೆ ಮಾಡಿಲ್ಲ. 2023ರಲ್ಲಿದ್ದ ಸಾರಿಗೆ ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿ ಭತ್ಯೆ ವಿಲೀನಿಗೊಳಿಸಿ ಶೇ.25ರಷ್ಟು ಮೂಲ ವೇತನ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿಕೊಂಡು ಬಂದರೂ ಪ್ರಯೋಜನವಾಗುತ್ತಿಲ್ಲ ಎಂದರು.
ಕಳೆದ ಬಾರಿ ಮುಷ್ಕರ ಕೈಗೊಂಡಿದ್ದ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅವರೆಲ್ಲರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅಲ್ಲದೆ, ಸಾರಿಗೆ ನೌಕರರಿಗೆ ಸಮಾನ ವೇತನ ನೀಡಬೇಕು. ನೌಕರರ ಮೇಲಿನ ನಿರಂತರ ದೌರ್ಜನ್ಯ ತಕ್ಷಣವೇ ನಿಲ್ಲಿಸಬೇಕು. ನಮ್ಮ ಹೋರಾಟಕ್ಕೆ ಎಲ್ಲ ಸಂಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಸಿ.ಎಸ್.ಬಿಡ್ನಾಳ, ಸುರೇಶ ಯರಡ್ಡಿ, ಈರಣ್ಣ ಮದವಾಲ, ರಾಜು ಪನ್ಯಾಗೋಳ, ಡಿ.ಎನ್.ಕಾಂಬಳೆ, ಪ್ರಕಾಶ ಶಿದ್ನಾಳ, ಉಮೇಶ, ವೈ.ಜಿ.ಬಟ್ಟಸೂರ ಇತರರಿದ್ದರು.