ಜಿಲ್ಲೆ

ರಾಮನಗರದಲ್ಲಿ ಕೆಎಸ್​ಆರ್​ಟಿಸಿ ಬಸ್​ಗೆ ಕಲ್ಲು ತೂರಾಟ: ವಿಜಯಪುರದಲ್ಲಿ ಸಾರಿಗೆ ನೌಕರರ ಎಳೆದೊಯ್ದ ಪೊಲೀಸರು

ರಾಮನಗರ/ವಿಜಯಪುರ: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ದಿಢೀರ್ ಮುಷ್ಕರದ ಪರಿಣಾಮ ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ, ಮುಷ್ಕರ ಯಶಸ್ವಿಗೊಳಿಸಬೇಕೆಂಬ ಭರದಲ್ಲಿ ರಾಮನಗರದಲ್ಲಿ ಕೆಎಸ್​ಆರ್​ಟಿಸಿ ಬಸ್​ ಮೇಲೆ ಕಲ್ಲು ತೂರಾಟ ನಡೆದಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಅಪರಿಚಿತರು ಕೆಎಸ್​ಆರ್​ಟಿಸಿ ಬಸ್​ಗೆ ಕಲ್ಲು ತೂರಿದ್ದಾರೆ. ಬಸ್ಸಿನ ಮುಂಭಾಗದ ಗಾಜು ಪುಡಿಯಾಗಿದ್ದು, ಪ್ರಯಾಣ ವಿವರದ ಬೋರ್ಡ್ ಇರುವ ಕಡೆ ಕಲ್ಲು ಬಿದ್ದ ಗುರುತಾಗಿದೆ. ಪ್ರಯಾಣಿಕರಿಗೆ ಯಾರಿಗೂ ತೊಂದರೆಯಾಗಿಲ್ಲ. ಮೈಸೂರಿನಿಂದ ಬೆಂಗಳೂರಿಗೆ ಬಸ್​ ಸಂಚರಿಸುತ್ತಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಇನ್ನೊಂದೆಡೆ ವಿಜಯಪುರ ಜಿಲ್ಲಾ ಕೇಂದ್ರದಲ್ಲಿರುವ ಬಸ್​ನಿಲ್ದಾಣದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿದ್ದರು. ಇದಕ್ಕೆ ಅವಕಾಶ ನೀಡದ ಪೊಲೀಸರು ಸಾರಿಗೆ ನೌಕರರ ನಾಯಕರೆನಿಸಿಕೊಂಡವರ ಕತ್ತಿನಪಟ್ಟಿ ಹಿಡಿದೆಳೆದುಕೊಂಡು ಹೋದ ದೃಶ್ಯ ಕಂಡುಬಂತು. ಕೂಡಲೇ ಉಳಿದ ನೌಕರರೂ ಜತೆಗೂಡಿ ಪೊಲೀಸರಿಗೆ ಮನವಿ ಮಾಡಿಕೊಂಡು ಇಬ್ಬರು ಪೊಲೀಸ್ ವಶದಿಂದ ಬಿಡಿಸಿಕೊಂಡು ಹೋದರು.