ಜಿಲ್ಲೆ

ಜಿಲ್ಲೆಯಲ್ಲಿ ಸಾರಿಗೆ ಆಮೆವೇಗ, ವಿರಳ ಪ್ರಯಾಣಿಕರು, ಷರತ್ತು ಬದ್ಧ ಅನುಮತಿಗೆ ಸಾರಿಗೆ ಇಲಾಖೆ ಬದ್ಧತೆ

Bengaluru Rural

ಬೆಂಗಳೂರು/ವಿಜಯಪುರ: ಸರ್ಕಾರ ಸಾರಿಗೆ ಸೇವೆಗೆ ಷರತ್ತುಬದ್ಧ ಅನುಮತಿ ನೀಡಿದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಅರಂಭವಾಯಿತಾದರೂ ಬೆರಳೆಣಿಕೆ ಮಂದಿಯಷ್ಟೇ ಪ್ರಯಾಣಿಸಿದರು.

ಚಿಕ್ಕಬಳ್ಳಾಪುರ 4 ಹಾಗೂ ದೊಡ್ಡಬಳ್ಳಾಪುರದ 1 ಡಿಪೋದಿಂದ ಸುಮಾರು 70 ಬಸ್‌ಗಳು ರಸ್ತೆಗಿಳಿದರೂ, ಇದರಲ್ಲಿ ಭಾಗಶಃ ಬಸ್‌ಗಳು ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಸಂಚರಿಸಿದ್ದ ದೃಶ್ಯ ಕಂಡುಬಂತು. ಚಿಕ್ಕಬಳ್ಳಾಪುರದಿಂದ ಕೋಲಾರದೆಡೆಗೆ ಕೇವಲ 1 ಬಸ್, ಶಿಡ್ಲಘಟ್ಟದಿಂದ ಬೆಂಗಳೂರಿಗೆ 4 ಬಸ್, ವಿಜಯಪುರದಿಂದ ಶಿವಾಜಿನಗರಕ್ಕೆ 4 ಬಿಎಂಟಿಸಿ ಬಸ್‌ಗಳು ಮಾತ್ರ ಸಂಚರಿಸಿವೆ.

ಜಿಲ್ಲೆಯಿಂದ ಬೆಂಗಳೂರು ಕಡೆಗೆ ಸಾಗುವ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದಾರೆ. ಗುಡಿಬಂಡೆ, ಚಿಕ್ಕ

ಬಳ್ಳಾಪುರ ಮಾರ್ಗದಲ್ಲಿ ಅತಿ ಕಡಿಮೆ ಪ್ರಯಾಣಿಕರು ಸಂಚರಿಸಿದ್ದಾರೆ. ಹೊಸಕೋಟೆ, ದೇವನಹಳ್ಳಿ ಹಾಗೂ ನೆಲಮಂಗಲ ಭಾಗದಲ್ಲೂ ಪ್ರಯಾಣಿಕರ ಸಂಖ್ಯೆ ತೀರ ವಿರಳವಾಗಿತ್ತು. ಮೊದಲ ದಿನ ಬಹುತೇಕ ಕೂಲಿಕಾರ್ಮಿಕರು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಪ್ರತಿಯೊಬ್ಬರ ಮಾಹಿತಿ: ಸರ್ಕಾರದ ಗೈಡ್‌ಲೈನ್ ಅನ್ವಯ ಪ್ರತಿ ಪ್ರಯಾಣಿಕರ ಹೆಸರು, ವಿಳಾಸ ಪಡೆದು ಬಳಿಕವಷ್ಟೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸ್‌ಗಳಲ್ಲೆ ಸ್ಯಾನಿಟೈಸರ್ ವ್ಯವಸ್ಥೆ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಬಸ್‌ಗಳಲ್ಲಿ ಗರಿಷ್ಠ 30 ಪ್ರಯಾಣಿಕರಿಗಷ್ಟೆ ಅವಕಾಶ ನೀಡಲಾಗಿತ್ತು. ಆದರೆ ಮೊದಲ ದಿನವಾದ ಮಂಗಳವಾರ ಯಾವುದೇ ಬಸ್‌ಗಳಲ್ಲಿ 30 ಮಂದಿಯೂ ಪ್ರಯಾಣಿಸಿಲ್ಲ ಎನ್ನಲಾಗಿದೆ.

ಕೆಲವೆಡೆ ಟ್ರಬಲ್: ಕೆಲವು ಬಸ್‌ಗಳು ಬೆಳಗ್ಗೆ ಸ್ಟಾರ್ಟ್ ಆಗದೆ ತೊಂದರೆಯಾದ ಪ್ರಸಂಗಗಳು ನಡೆದವು. ಕೂಡಲೇ ಇಲಾಖೆ ಮೆಕಾನಿಕ್ ಮೂಲಕ ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾನಿಟೈಸರ್: ಡಿಪೋಗಳಿಂದ ಹೊರಡುವ ಎಲ್ಲ ಬಸ್‌ಗಳಿಗೂ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಹಾಗೇ ಡಿಪೋಗೆ ಹಿಂತಿರುಗಿದ ಬಳಿಕವೂ ಕ್ರಿಮಿನಾಶಕ ಸಿಂಪಡಣೆ ನಡೆಸಲಾಗುತ್ತಿದ್ದು, ಪ್ರತಿ ದಿನ ಇದು ಕಡ್ಡಾಯವಾಗಿ ನಡೆಯಲಿದೆ. ಪ್ರತಿ ಬಸ್ ತಂಗುದಾಣಗಳಲ್ಲೂ ಪರಸ್ಪರ ಅಂತರ ಕಾಪಾಡಲು ಗುರುತು ಹಾಕಲಾಗಿದೆ. ಪ್ರಯಾಣಿಕರು ಗುಂಪುಗೂಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಕ್ಕಳು, ಹಿರಿಯರಿಗೆ ಅವಕಾಶವಿಲ್ಲ: ಜಿಲ್ಲೆಯ ಹಲವು ಕಡೆಗಳಲ್ಲಿ ಮಕ್ಕಳು ಹಾಗೂ ಹಿರಿಯ ನಾಗರಿಕರು ಪ್ರಯಾಣಿಕ್ಕೆ ಮುಂದಾಗಿದ್ದ ದೃಶ್ಯ ಕಂಡುಬಂತಾದರೂ, ಸಾರಿಗೆ ಅಧಿಕಾರಿಗಳು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ವಾಪಸ್ ತೆರಳಬೇಕಾಯಿತು. ಸರ್ಕಾರದ ನಿಯಮದಂತೆ ಪರಸ್ಪರ ಅಂತರಕ್ಕೆ ಅನುಗುಣವಾಗಿ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಅವಕಾಶ ಮಾಡಿಕೊಡಲಾಯಿತು ಎಂದು ವಿಜಯಪುರ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ನಾಗೇಶ್ ತಿಳಿಸಿದರು.

ಸರ್ಕಾರದ ಷರತ್ತುಬದ್ಧ ಅನುಮತಿಯನ್ವಯ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕರೊನಾ ಸೋಂಕು ಹರಡದಂತೆ ಇಲಾಖೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಸಂಜೆ 7 ಗಂಟೆಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು. ರುದ್ರಪ್ರಸಾದ್ ಎಇಇ ಚಿಕ್ಕಬಳ್ಳಾಪುರ ಡಿಪೋ