ಜಿಲ್ಲೆ

ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ: ಜಂಟಿ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ನಂಜುಂಡಯ್ಯ ಮಾಹಿತಿ

ಮಂಡ್ಯ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಡಿ.31ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ನಂಜುಂಡಯ್ಯ, ಎಐಟಿಯುಸಿ ಮಂಡ್ಯ ವಿಭಾಗ ಅಧ್ಯಕ್ಷ ಮಲ್ಲೇಶ್, ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಉಪಾಧ್ಯಕ್ಷ ಎಂ.ವಿಜಯಕುಮಾರ್ ತಿಳಿಸಿದರು.

ಪ್ರತಿದಿನ ಸುಮಾರು ಒಂದು ಕೋಟಿಗೂ ಹೆಚ್ಚಿನ ಪ್ರಯಾಣಿಕರನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸುವ ಮೂಲಕ ಹಾಗೂ ಶಕ್ತಿ ಯೋಜನೆಯ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವ ನಿಟ್ಟಿನಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಸಾರಿಗೆ ನಿಗಮಗಳ ಒಂದು ಲಕ್ಷಕ್ಕೂ ಅಧಿಕ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿರುವುದನ್ನು ಖಂಡಿಸಿ ಮುಷ್ಕರ ಕೈಗೊಳ್ಳಲಾಗುತ್ತಿದೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಾರಿಗೆ ಸಚಿವರು, ಮುಖ್ಯಮಂತ್ರಿ, ಸಾರಿಗೆ ನಿಗಮಗಳ ಆಡಳಿತ ವರ್ಗಕ್ಕೆ ಈಗಾಗಲೇ ಹಲವು ಬಾರಿ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಆದರೂ ಈವರೆಗೂ ಸರ್ಕಾರ ಅಥವಾ ಸಾರಿಗೆ ನಿಗಮಗಳ ಆಡಳಿತ ವರ್ಗದಿಂದಾಗಲಿ ಯಾವುದೇ ರೀತಿಯ ಸ್ಪಂದನೆ ಸಿಗದಿರುವುದು ಕಾರ್ಮಿಕರಿಗೆ ತೀವ್ರ ನಿರಾಶೆ ಮೂಡಿಸಿದೆ. ಮುಷ್ಕರ ನಡೆಸುವ ಬಗ್ಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಡಿ.9ರಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದಿದೆ. ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ ಮುಷ್ಕರ ಮಾಡುವ ಮುನ್ನ 21 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ಅದರಂತೆ ನೋಟಿಸ್ ನೀಡಿ ಗಮನಕ್ಕೆ ತಂದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು.

ಈ ಮುಷ್ಕರ ಯಶಸ್ವಿಗೆ ಸಾರಿಗೆ ನಿಗಮಗಳ ಇತರೆ ಕಾರ್ಮಿಕ ಸಂಘಟನೆಗಳು, ವಿವಿಧ ಸಂಘ, ಸಂಸ್ಥೆಗಳು ಕೈಜೋಡಿಸಿವೆ. ಸಾರ್ವಜನಿಕರು ಮುಷ್ಕರಕ್ಕೆ ಸಹಕಾರ ನೀಡುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು. 2020ರ ಜ.1 ರಿಂದ 38 ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು. 2024 ಜನವರಿಯಿಂದ ಹೊಸ ವೇತನ ಪರಿಷ್ಕರಣೆ, ನಿವೃತ್ತರಾದ ನೌಕರರಿಗೆ 2024ರ ಜೂ.27ರ ಸುತ್ತೋಲೆಯಲ್ಲಿರುವಂತೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲ ನೌಕರರಿಗೆ ಪ್ರತಿ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ 2 ಸಾವಿರ ರೂ ನೀಡಬೇಕು. ಎಲ್ಲ ನೌಕರರಿಗೆ ಉಚಿತ ಔಷಧ ಪೂರೈಸಬೇಕು. ಇಎಸ್‌ಐ ಮಾದರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದರು.