ಕೊಳ್ಳೇಗಾಲ: ಜನರಿಗೆ ಪ್ರಯಾಣ ಸೇವೆ ನೀಡಬೇಕಾದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಸಮರ್ಪಕ ಸೇವೆ ನೀಡದೆ ತಾಲೂಕಿನ ಸತ್ತೇಗಾಲ ಹಾಗೂ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಜನರು ತಾಪತ್ರಯಕ್ಕೆ ಸಿಲುಕಿದ್ದಾರೆ.
ಬೆಂಗಳೂರಿನಿಂದ ತಮಿಳುನಾಡಿನವರೆಗೆ ಚಾಮರಾಜನಗರ ಮೂಲಕ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ (948) ನಿರ್ಮಾಣ ಗೊಂಡಿದೆ. ಈ ಬೈಪಾಸ್ ರಸ್ತೆ ಅಭಿವೃದ್ಧಿಯಾದ ಬಳಿಕ ಸತ್ತೇಗಾಲ ಗ್ರಾಮ ಹಾಗೂ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಗ್ರಾಮದ ಜನರಿಗೆ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳ ಸೇವೆ ಸರಿಯಾಗಿ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು-ಕೊಳ್ಳೇಗಾಲ ಮಾರ್ಗವಾಗಿ ಸಂಚಾರ ಮಾಡುವ ಬಹುತೇಕ ಬಸ್‌ಗಳು ಸತ್ತೇಗಾಲ ಗ್ರಾಮ ಹಾಗೂ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಒಳಗೆ ಬಾರದೆ ಬೈಪಾಸ್ ರಸ್ತೆಯಲ್ಲಿಯೇ ಸಂಚರಿಸುತ್ತಿದೆ. ಆಗೊಂದು ಈಗೊಂದು ಬಸ್ ಬಂದರೂ ನಾನ್ ಸ್ಟಾಪ್ ಎಂದು ನಿಲ್ಲಿಸುತ್ತಿಲ್ಲ್ಲ ಎಂಬುದು ಜನರ ಅಳಲಾಗಿದೆ.
ಸತ್ತೇಗಾಲ ಡಾ.ಬಿ.ಆರ್.ಅಂಬೇಡ್ಕರ್ ಸತ್ಯಾದ್ರಿ ಯುವಕರ ಸಂಘ ಅಧ್ಯಕ್ಷ ಅವಿನಾಶ್, ಉಪಾಧ್ಯಕ್ಷ ಬೈರ, ಪದಾಧಿಕಾರಿ ನಂಜುಂಡಸ್ವಾಮಿ, ಸಿದ್ದಾರ್ಥ್, ಮುತ್ತು ರಾಜ್, ಮಲ್ಲೇಶ್, ಲಿಂಗರಾಜು, ರೈತ ಮುಖಂಡ ಭಾಸ್ಕರ್ ಮಹದೇವ ಇತರರು ಶುಕ್ರವಾರ ಕೊಳ್ಳೇಗಾಲಕ್ಕೆ ಭೇಟಿ ನೀಡಿ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ಗೆ ಸೂಕ್ತ ಬಸ್ ಸೇವೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಬೈಪಾಸ್‌ನಲ್ಲೇ ಜನರನ್ನು ಇಳಿಸುವ ಬಸ್: ಸತ್ತೇಗಾಲ ಗ್ರಾಮ ಹಾಗೂ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಒಳಗೆ ಕೆಎಸ್‌ಆರ್‌ಟಿಸಿ ಬಸ್ ಬಾರದೆ ಕೊಳ್ಳೇಗಾಲ ಹಾಗೂ ಬೆಂಗಳೂರು ಕಡೆಯಿಂದ ಬಂದ ಬಸ್ ಸತ್ತೇಗಾಲ ಹಾಗೂ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಲ್ಲಿ ಜನರನ್ನು ಬೈಪಾಸ್ ಜಂಕ್ಷನ್‌ನಲ್ಲಿಯೇ ಬಸ್ ಇಳಿಸಲಾಗುತ್ತಿದೆ. ಅಲ್ಲದೆ, ಕೊಳ್ಳೇಗಾಲದಿಂದ ಸತ್ತೇಗಾಲಕ್ಕೆ ಬರುವ ಜನರನ್ನು ಊರಿನೊಳಗೆ ಬಿಡದೆ ಬೈಪಾಸ್‌ನಲ್ಲಿಯೇ ಬಿಟ್ಟು ಹೋಗಲಾಗುತ್ತಿದೆ. ಇಲ್ಲಿಂದ ಗ್ರಾಮದೊಳಗೆ ಹೋಗಲು ಜನರು ಸುಮಾರು 1ರಿಂದ 2 ಕಿ.ಮೀ ನಡೆಯಬೇಕಾದ ಪರಿಸ್ಥಿತಿ ಇದೆ.
ಸಚಿವರಿಗೆ ದೂರು ನೀಡಿದರೂ ಪ್ರಯೋಜನವಿಲ್ಲ: ಬಸ್ ಅವ್ಯಸ್ಥೆಗೆ ಬೇಸತ್ತು ಸತ್ತೇಗಾಲ ಗ್ರಾಮದ ನಿವಾಸಿಯೊಬ್ಬರು ಬೆಂಗಳೂರಿಗೆ ತೆರಳಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಲಿಖಿತ ದೂರು ನೀಡಿ ಸತ್ತೇಗಾಲ ಗ್ರಾಮದೊಳಗೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುವ ರೀತಿ ಕ್ರಮವಹಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ವಿದ್ಯಾರ್ಥಿಗಳ ಪರದಾಟ: ಸತ್ತೇಗಾಲ ಹಾಗೂ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಿಂದ ಕೊಳ್ಳೇಗಾಲ ಹಾಗೂ ಮಳವಳ್ಳಿ ಕಡೆಗೆ ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಸಿಗದೆ ಸಮಸ್ಯೆ ಉಂಟಾಗಿದೆ. ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ರಾತ್ರಿ ವೇಳೆ ಬೈಪಾಸ್‌ನಲ್ಲಿ ಇಳಿಸುವುದರಿಂದ ದರೋಡೆಕೋರರ ಭಯ ಮಕ್ಕಳು, ಮಹಿಳೆಯರಲ್ಲಿ ಕಾಡುತ್ತಿದೆ.
ಕಾಮಗಾರಿ ನೆಪವೊಡ್ಡಿ ಬೈಪಾಸ್ ಪ್ರಯಾಣ: ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸೇತುವೆಯಿಂದ ಬೆಂಗಳೂರು ಹೆದ್ದಾರಿ ರಸ್ತೆ (ಹಳೆಯ 209) ರಸ್ತೆಯಲ್ಲಿ ಜಲ ಮಂಡಳಿ ಕಾಮಗಾರಿ ನಡೆಯುತ್ತಿದೆ. ಈ ನೆಪವೊಡ್ಡಿ ಬಸ್ ಚಾಲಕರು ಹ್ಯಾಂಡ್‌ಪೋಸ್ಟ್ ಒಳಗೆ ಬಿಡದೆ ಬೈಪಾಸ್ ಮೂಲಕ ತೆರಳುತ್ತಿದ್ದಾರೆ. ಇದರಿಂದ ಬಹಳ ಸಮಸ್ಯೆ ಉಂಟಾಗಿದೆ. ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಒಳಗೆ ಬಸ್ ಬಿಟ್ಟು ಮತ್ತೆ ಬೈಪಾಸ್‌ಗೆ ಹೋದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.