ಚಂಗವಾಡಿ ಬಳಿ ಸಾರಿಗೆ ಬಸ್ ಕೆಟ್ಟು ನಿಂತಿದ್ದು ಜನರು ಊರಿಗೆ ತೆರಳಲು ಕಾದು ನಿಂತಿರುವುದು.  
ಜಿಲ್ಲೆ

ಚಂಗವಾಡಿ ಬಳಿ ಕೆಟ್ಟು ನಿಂತ ಸಾರಿಗೆ ಬಸ್

ಅಭಿನಯ್ ಎಚ್.ಎಂ

ಹನೂರು: ಪಟ್ಟಣದಿಂದ ಗಾಣಿಗಮಂಗಲ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಮಂಗಳವಾರ ಚಂಗವಾಡಿ ಗ್ರಾಮದ ಬಳಿ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಮಧ್ಯಾಹ್ನ 12.30ರ ವೇಳೆಯಲ್ಲಿ ಹನೂರಿನಿಂದ ಗಾಣಿಗಮಂಗಲಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಣಗಳ್ಳಿ, ಬಂಡಳ್ಳಿ, ಹಲಗಾಪುರ, ಶಾಗ್ಯ, ಕಳ್ಳಿದೊಡ್ಡಿ, ಗಾಣಿಗಮಂಗಲ ಸೇರಿದಂತೆ ಇತರ ಭಾಗದ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಆದರೆ ಚಂಗವಾಡಿ ಗ್ರಾಮ ಸಮೀಪದಲ್ಲಿ ಬಸ್ ಕೆಟ್ಟು ನಿಂತಿತು. ಈ ಮಾರ್ಗದಲ್ಲಿ ಹೆಚ್ಚಿನ ಬಸ್ ಸೌಕರ್ಯವಿಲ್ಲದ ಪರಿಣಾಮ ಜನರು ಊರಿಗೆ ತೆರಳಲು ಬಿರು ಬಿಸಿಲಿನಲ್ಲಿಯೇ ಕಾದು ನಿಲ್ಲುವಂತಾಯಿತು. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸಿದರು. ಸಾರಿಗೆ ಅವ್ಯವಸ್ಥೆಯ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದರು. ಕೆಲವರು ಆಗಮಿಸಿದ ಗೂಡ್ಸ್ ವಾಹನದಲ್ಲಿ ತೆರಳಿದರೆ, ಇನ್ನು ಕೆಲವರು ಖಾಸಗಿ ಬಸ್ ಮೂಲಕ ತೆರಳಬೇಕಾಯಿತು.

ಸುಸ್ಥಿತಿಯಲ್ಲಿರುವ ಬಸ್‌ಗೆ ಒತ್ತಾಯ: ಗಾಣಿಗಮಂಗಲಕ್ಕೆ ಸಂಚರಿಸುವ ಸಾರಿಗೆ ಬಸ್ ಹಳೆಯದಾಗಿದ್ದು, ಸುಸ್ಥಿತಿಯಲ್ಲಿಲ್ಲ. ಇದರಿಂದ ಮಾರ್ಗಮಧ್ಯೆ ಆಗಾಗ್ಗೆ ಕೆಟ್ಟು ನಿಲ್ಲುತ್ತಿದೆ. ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಆದಿವಾಸಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಾಣಿಗಮಂಗಲದ ನಾಗೇಂದ್ರ ಒತ್ತಾಯಿಸಿದ್ದಾರೆ.