ಜಿಲ್ಲೆ

ಅರಣ್ಯ ಪ್ರದೇಶದಲ್ಲೇ ಕೆಟ್ಟು ನಿಂತ ಸಾರಿಗೆ ಬಸ್

ಕಿರಣ್ ಗೌಡ.ಜಿ

ಹನೂರು: ತಾಲೂಕಿನ ಗಾಜನೂರು - ಸತ್ಯಮಂಗಲ ಮಾರ್ಗದ ಅರಣ್ಯ ಪ್ರದೇಶದ ಮಧ್ಯೆ ಸೋಮವಾರ ಸಾರಿಗೆ ಬಸ್ ಕೆಟ್ಟು ನಿಂತ ಪರಿಣಾಮ ಜನರು ನಡೆದುಕೊಂಡು ತೆರಳಿ ತೊಂದರೆ ಅನುಭವಿಸಿದರು.

ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ಧಾಮದ ನಡುವೆ ಹಾದು ಹೋಗಿದ್ದು, ಕಾಡು ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಈ ಭಾಗದಲ್ಲಿ ಬೆರಳೆಣಿಕೆ ಬಸ್‌ಗಳಷ್ಟೇ ಸಂಚರಿಸುತ್ತವೆ. ಬಸ್ ಸೌಕರ್ಯವಿಲ್ಲದೇ ಜನರು ಗಂಟೆಗಟ್ಟಲೇ ಕಾದು ಕುಳಿತು ಸಂಚರಿಸಬೇಕಿದೆ. ಈ ಮಧ್ಯೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ಕೆಲಸ ಕಾರ್ಯಗಳ ನಿಮಿತ್ತ ರಾಮಾಪುರ, ಹನೂರು, ಕೊಳ್ಳೇಗಾಲ ಇನ್ನಿತರ ಕಡೆಗಳಿಗೆ ಸುಮಾರು 40ಕ್ಕೂ ಹೆಚ್ಚು ಜನರು ಹೂಗ್ಯಂನಿಂದ ಹನೂರಿನ ಕಡೆಗೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗಾಜನೂರು-ಸತ್ಯಮಂಗಲ ಮಾರ್ಗದ ಅರಣ್ಯ ಪ್ರದೇಶದ ಮಧ್ಯೆ ಬಸ್ ಕೆಟ್ಟು ನಿಂತಿದೆ. ಪರಿಣಾಮ ಜನರು ಸುಮಾರು 3 ಕಿಮೀ ದೂರ ಸತ್ಯಮಂಗಲದತನಕ ನಡೆದು ಸಾಗಿ ಅಲ್ಲಿಂದ ಆಟೋಗಳ ಮೂಲಕ ರಾಮಾಪುರ ತಲುಪಿದರು. ಇದರಿಂದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಿದರು.

ಈ ಮಾರ್ಗದಲ್ಲಿ ಸುಮಾರು 6 ಕಿಮೀ ರಸ್ತೆ ಹದಗೆಟ್ಟಿರುವುದರಿಂದ ಪದೇ ಪದೆ ಬಸ್‌ಗಳು ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಇತ್ತ ಬೈಕ್ ಸವಾರರು ಸಂಚರಿಸಲು ಹರಸಾಹಸಪಡುವಂತಾಗಿದೆ. ಮಳೆಗಾಲದಲ್ಲಿ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಹಾಗೆಯೇ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಭಾರತೀಯ ಕಿಸಾನ್ ಸಂಘದ ಕೊಪ್ಪ ಗ್ರಾಮ ಘಟಕದ ಅಧ್ಯಕ್ಷ ನಾಗರಾಜು ಒತ್ತಾಯಿಸಿದ್ದಾರೆ.