ಉಡುಪಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವುದರಿಂದ ನ್ಯಾಯದಾನದಲ್ಲಿ ಪಾರದರ್ಶಕತೆ ಸಾಧ್ಯವಿದೆ. ವಕಾಲತ್ತು ನೇರಪ್ರಸಾರದಿಂದ ಕಗಾರರಿಗೆ ಪ್ರಕರಣದ ಮಾಹಿತಿ ಲಭ್ಯವಾಗುತ್ತದೆ ಎಂದು ಸವೋರ್ಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಅರವಿಂದ್ ಕುಮಾರ್ ಅಭಿಪ್ರಾಯಪಟ್ಟರು.
ಭಾನುವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿರುವ ನಿರ್ದೇಶಕ ತತ್ವದಲ್ಲಿ ಪ್ರಜೆಗಳು ಯಾವುದೇ ಕ್ಷೇತ್ರದಲ್ಲಿದ್ದರೂ ನೈಪುಣ್ಯತೆ ಗಳಿಸಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ. ವಕೀಲರು ಈ ತತ್ವವನ್ನು ಪಾಲಿಸಬೇಕು. ಬಾಕಿ ಪ್ರಕರಣಗಳು ನ್ಯಾಯಾಲಯಗಳಿಗೆ ಹೊರೆಯಾಗಿದ್ದು, ಲೋಕ ಅದಾಲತ್ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ಕೇಸ್ಗಳನ್ನು ಇತ್ಯರ್ಥಗೊಳಿಸಬೇಕು ಎಂದು ಸಲಹೆ ನೀಡಿದರು.
ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾ. ಎಸ್. ಅಬ್ದುಲ್ ನಜೀರ್ ಸಾಹೇಬ್ ಮಾತನಾಡಿ, ವಕೀಲ ವೃತ್ತಿ ಚಿಕಿತ್ಸಕ ವೃತ್ತಿ. ಔಷಧಗಳು ದೇಹದ ಆರೋಗ್ಯ ಕಾಪಾಡಿದರೆ ವಕೀಲಿಕೆ ಸಮಾಜದ ನೋವನ್ನು ಗುಣಪಡಿಸುತ್ತದೆ. ಜಿಲ್ಲಾ ನ್ಯಾಯಾಲಯಗಳು ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು. ತಳಹಂತದಲ್ಲಿ ಸಾರ್ವಜನಿಕರ ಹಕ್ಕುಗಳನ್ನು ಸಂರಸುತ್ತವೆ ಎಂದರು.
25 ಕೋಟಿ ಮನೆಗಳಲ್ಲಿ ಶಾಂತಿಯಿಲ್ಲ
ದೇಶದಲ್ಲಿ ಸುಮಾರು 5 ಕೋಟಿ ವ್ಯಾಜ್ಯಗಳು ವಿಚಾರಣೆ ಹಂತದಲ್ಲಿದ್ದು, ಇದರಿಂದ 25 ಕೋಟಿ ಜನರು ಬಾಧಿತರಾಗಿದ್ದಾರೆ. ರಾಜ್ಯದಲ್ಲಿ 3 ಲಕ್ಷ ಕೇಸುಗಳಿದ್ದು, 30 ಲಕ್ಷ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಸಿವಿಲ್ ವ್ಯಾಜ್ಯಗಳು ಶಾಪವಾಗಿ ಕಾಡುತ್ತಿದ್ದು, ಇಂಥ ಮನೆಗಳಲ್ಲಿ ಶಾಂತಿಯೇ ಇಲ್ಲದಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕಾಗಿದೆ ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ. ಎನ್.ವಿ ಅಂಜಾರಿಯಾ ಅಧ್ಯಕ್ಷತೆ ವಹಿಸಿ, ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಉಡುಪಿ ವಕೀಲರ ಸಂಘದ ಸದಸ್ಯರಿಗೆ ನೀಡಲಾಗುವ ವಿಶಿಷ್ಟ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಿದರು.
ಹೈಕೋರ್ಟ್ ನ್ಯಾಯಾಧೀಶ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ. ಇ.ಎಸ್. ಇಂದಿರೇಶ್, 125 ರ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ. ಎಂ.ಜಿ. ಉಮಾ, ನ್ಯಾ. ರಾಮಚಂದ್ರ ಡಿ. ಹುದ್ದಾರ್, ನ್ಯಾ. ಟಿ. ವೆಂಕಟೇಶ್ ನಾಯ್ಕ್ , ಕಾನೂನು ಸಚಿವ ಎಚ್.ಕೆ. ಪಾಟೀಲ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಎಸ್. ಶೆಟ್ಟಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಮಾಹೆ ವಿವಿಯ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಉಪಸ್ಥಿತರಿದ್ದರು. ಶತಮಾನೋತ್ತರ ರಜತ ಮಹೋತ್ಸವ ಸಂಭ್ರಮದ ಸಮ್ಮೇಳನಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಪ್ರಾಸ್ತವಿಕ ಮಾತನಾಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವಿಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ವಕೀಲೆ ಮೇರಿ ಶ್ರೇಷ್ಠಾ ನಿರೂಪಿಸಿದರು.