ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಗ್ರಾಪಂ ಚುನಾವಣೆಗೆ ನಿಯೋಜನೆಗೊಂಡ ಪಿಆರ್‌ಒ, ಎಪಿಆರ್‌ಒಗಳು. 
ಜಿಲ್ಲೆ

ಪಾರದರ್ಶಕವಾಗಿ ಚುನಾವಣೆ ನಡೆಸಲು ತಹಸೀಲ್ದಾರ್ ಶ್ರೀಶೈಲ ತಳವಾರ್ ಸೂಚನೆ

Koppal

ಯಲಬುರ್ಗಾ: ಗ್ರಾಪಂ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಪಾರದರ್ಶಕವಾಗಿ ಚುನಾವಣೆ ನಡೆಸಬೇಕು ಎಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಪಂ ಚುನಾವಣೆ ನಿಮಿತ್ತ ಬುಧವಾರ ಚುನಾವಣೆಗೆ ನಿಯೋಜನೆಗೊಂಡ ಪಿಆರ್‌ಒ, ಎಪಿಆರ್‌ಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಡಿ.22 ರಂದು ತಾಲೂಕಿನ 20ಗ್ರಾಪಂಗೆ ಜರುಗುವ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳು ಬ್ಯಾಲೆಟ್, ಮತಪತ್ರ ಕಡ್ಡಾಯವಾಗಿ ಪರಿಶೀಲಿಸಬೇಕು. ಮತದಾನ ದಿನದಂದು ಬಹಳ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಮತಗಟ್ಟೆಯಲ್ಲಿ ಅಧಿಕಾರಿಗಳು ಕೋವಿಡ್ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಶಾಂತಿ ಮತ್ತು ಸುವ್ಯವಸ್ಥೆಯಿಂದ ಮತದಾನ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಚುನಾವಣೆಗೆ ಪಿಆರ್‌ಒ, ಎಪಿಆರ್‌ಒ ಸೇರಿ 376 ಸಿಬ್ಬಂದಿಗೆ 7 ಕೊಠಡಿಗಳಲ್ಲಿ 7 ಜನ ಬೋಧಕರಿಂದ ಚುನಾವಣೆ ಪ್ರಕ್ರಿಯೆ ಬಗ್ಗೆ ಸೂಕ್ತ ತರಬೇತಿ ನೀಡಲಾಗಿದೆ. ಚುನಾವಣೆಗೆ ಕರ್ತವ್ಯನಿರತ ಅಧಿಕಾರಿಗಳಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ದೂರು ಸ್ವೀಕಾರ ಕೇಂದ್ರ: ಗ್ರಾಪಂ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣೆ ಅಚ್ಚು ಕಟ್ಟಾಗಿ ನಡೆಸಲು ಸೂಕ್ತ ನಿಗಾವಹಿಸಲಾಗಿದೆ. ತಾಪಂ ಕಚೇರಿಯಲ್ಲಿ ದೂರು ಸ್ವೀಕಾರ ಕೇಂದ್ರ ಪ್ರಾರಂಭಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸಿದರೆ ತಕ್ಷಣ ದೂ. ಸಂಖ್ಯೆ 08534-220136ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ತಾಪಂ ಇಒ ಡಾ.ಜಯರಾಮ ಚವಾಣ್ ತಿಳಿಸಿದರು. ಗ್ರಾಪಂ ಚುನಾವಣೆ ನೋಡಲ್ ಅಧಿಕಾರಿ ಟಿ.ಕೃಷ್ಣಮೂರ್ತಿ, ಉಪ ಚುನಾವಣಾಧಿಕಾರಿ ವಿಜಯಕುಮಾರ್ ಗುಂಡೂರು, ಸಮೀರ್ ಕುಮಾರ್, ಸಿಬ್ಬಂದಿ ಇತರರಿದ್ದರು.