ಜಿಲ್ಲೆ

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಸಾಮೂಹಿಕ ಅಕ್ಷರಾಭ್ಯಾಸ

ಮೈಸೂರು: ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಸಾಮೂಹಿಕ ಅಕ್ಷರಾಭ್ಯಾಸ ಹಾಗೂ ಸರಸ್ವತಿ ಪೂಜೆ ಹಮ್ಮಿಕೊಳ್ಳಲಾಗಿತ್ತು.
ನಗರದ ಅವನಿ ಶೃಂಗೇರಿ ಮಠದ ವೇದಬ್ರಹ್ಮ ನಾಗರಾಜಶಾಸ್ತ್ರಿ ನೇತೃತ್ವದಲ್ಲಿ ಸರಸ್ವತಿ ಪೂಜೆ ಪ್ರಾರಂಭಿಸಲಾಯಿತು. ನಂತರ ಪಾಲಕರು ಮಕ್ಕಳ ಕೈಹಿಡಿದು ಅಕ್ಕಿಯಲ್ಲಿ ಓಂಕಾರ ಮತ್ತು ಗಣೇಶನಾಮ, ಕನ್ನಡದಲ್ಲಿ ಅ ಆ ಇ ಈ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು.
ಮಹರ್ಷಿ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತೇಜಸ್‌ಶಂಕರ್ ಮಾತನಾಡಿ, ಪುರಾಣದ ಪ್ರಕಾರ ಸರಸ್ವತಿ ಪೂಜೆ ಮಾಡುವುದರಿಂದ ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಮಕ್ಕಳ ಶೈಕ್ಷಣಿಕ ಬದುಕು ಉತ್ತಮವಾಗುತ್ತವೆ ಎಂಬುದು ನಂಬಿಕೆ ಎಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಸರಳ, ಸಾಮೂಹಿಕ ವಿವಾಹ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದಿಂದ ತಂದಿರುವ ಸಪ್ತಪದಿ ಯೋಜನೆಯಂತೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯಿಂದ ರಾಜ್ಯದ ಎಲ್ಲ ಶಾಲೆಗಳಲ್ಲೂ ಹಮ್ಮಿಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯ, ಮಕ್ಕಳಿಗೆ ಶಿಕ್ಷಣದ ಜತೆಯಲ್ಲೆ ಕಲೆ, ಕ್ರೀಡೆ, ಸಾಂಸ್ಕೃತಿಕ ಸಂಗೀತ ಸೇರಿದಂತೆ ಯಾವ ಕ್ಷೇತ್ರದಲ್ಲಿ ಪ್ರತಿಭಾವಂತರು ಎಂದು ಅರಿತು ಪ್ರಥಮ ಹಂತದಲ್ಲೆ ಪಾಲಕರು ಮನೆಯಿಂದ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಪುರಾಣದಲ್ಲಿ ಪಾರ್ವತಿದೇವಿ ತನ್ನ ಮಗು ಗಣೇಶನಿಗೂ ಅಕ್ಷರಾಭ್ಯಾಸ ಮಾಡಿಸಿದ ಉಲ್ಲೇಖವಿದೆ. ಮಗುವಿಗೆ ಅಕ್ಷರಾಭ್ಯಾಸ ಮಾಡಿದ ಪಾಲಕರು, ಸನ್ಮಾರ್ಗದ ಕಡೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಕರ್ತವ್ಯವಾಗಿದೆ. ಕಲಿಕೆಗೆ ಎಂದೂ ಅಂತ್ಯವಿಲ್ಲ. ಪೀಳಿಗೆಗೆ ತಕ್ಕಂತೆ ಸಮಾಜದಲ್ಲಿ ತಂತ್ರಜ್ಞಾನ, ಶಿಕ್ಷಣದ ಮಹತ್ವ ಹೆಚ್ಚುತ್ತಲೇ ಇರಬೇಕು. ಪ್ರತಿಯೊಬ್ಬರೂ ಪಡೆದ ವಿದ್ಯೆ ನಂತರದಲ್ಲಿ ಮತ್ತೊಬ್ಬರಿಗೆ ದಾನ ಮಾಡಲು ಮುಂದಾಗಬೇಕು ಸಲಹೆ ನೀಡಿದರು.
150ಕ್ಕೂ ಹೆಚ್ಚು ಮಕ್ಕಳು ಅಕ್ಷರಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಪದಾಧಿಕಾರಿಗಳಾದ ಅಜಯ್ ಶಾಸ್ತ್ರಿ, ಸವಿತಾ ಘಾಟ್ಕೆ, ಶಾಲೆಯ ಹಿರಿಯ ಪ್ರಾಂಶುಪಾಲ ಕೆ.ಆರ್.ಗೋಪಾಲಸ್ವಾಮಿ, ಶಿಕ್ಷಕರಾದ ರಾಘವೇಂದ್ರ, ಪ್ರಿಯಾಂಕಾ, ಅನಿತಾ ಇತರರು ಇದ್ದರು.