ಜಿಲ್ಲೆ

ಕೇಂದ್ರದಿಂದ ಸಂವಿಧಾನ ವಿರೋಧಿ ನಡೆ: ಡಾ. ಶ್ವೇತಾ ಮಡಪ್ಪಾಡಿ ಆರೋಪ

ಮೈಸೂರು: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನಡೆಯಿಂದ ಸಂವಿಧಾನ ಅಪಾಯಕ್ಕೆ ಸಿಲುಕಿದ್ದು, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ನಿಯಂತ್ರಿಸಲು ಬಿಜೆಪಿಯಿಂದ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಡಾ. ಶ್ವೇತಾ ಮಡಪ್ಪಾಡಿ ದೂರಿದರು.
ಕಳೆದ ಹತ್ತು ವರ್ಷದಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಅವಮಾನ ಮಾಡುತ್ತಲೇ ಬಂದಿದೆ. ದೇಶದಲ್ಲಿನ ತೆರಿಗೆ ವ್ಯವಸ್ಥೆ ಜನಸಾಮಾನ್ಯರ ಕತ್ತು ಹಿಸುಕುವ ತನಕದ ಸ್ಥಿತಿ ತಲುಪಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೇಂದ್ರದ ಬಿಜೆಪಿ ನಡೆಯಿಂದ ಸಂವಿಧಾನಕ್ಕೆ ಅಪಾಯ ಉಂಟಾಗುತ್ತಿದೆ. ನಿರುದ್ಯೋಗ, ರೈತರ ಸಮಸ್ಯೆ, ಮಹಿಳಾ ಮೀಸಲಾತಿಯ ನಿರ್ಲಕ್ಷ್ಯ, ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಈಗ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ದುಡಿಯುವ ವರ್ಗ ನಿರ್ಲಕ್ಷೃಕ್ಕೆ ಒಳಗಾಗಿದೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ತಡೆಗೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ತಾನು ನಿರ್ವಹಿಸಬೇಕಾದ ಕೆಲಸ ಬಿಟ್ಟು ರಾಜ್ಯದ ಆಡಳಿತಕ್ಕೆ ಅನವಶ್ಯಕವಾಗಿ ತಲೆ ಹಾಕುತ್ತಿದೆ ಎಂದು ದೂರಿದರು.
ಒಂದು ವೇಳೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗದವರ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತದೆ. ಸರ್ಕಾರದ ಸಂಸ್ಥೆಗಳು ತಮ್ಮ ಸ್ವಾಯತ್ತೆ ಮರೆತು ಪ್ರಭುತ್ವದ ಅಡಿಯಾಳುಗಳಾಗಿ ಕೆಲಸ ನಿರ್ವಹಿಸುವ ಸ್ಥಿತಿ ಬರುತ್ತದೆ ಎಂದು ಆರೋಪಿಸಿದರು.
ಕಾರ್ಪೋರೇಟ್ ವಲಯಗಳ ನಿರ್ದೇಶನದಂತೆ ಸರ್ಕಾರ ನಡೆಯುತ್ತಿದ್ದು, ಬಡವರನ್ನು ನಿರಂತರವಾಗಿ ಸುಲಿಗೆ ಮಾಡುತ್ತಿವೆ. ಬುಡಕಟ್ಟು ಜನರ ಬದುಕಿನ, ನೆಲ, ಜಲದ ಅಸ್ತಿತ್ವ ಬಂಡವಾಳಶಾಹಿಗಳ ಪಾಲಾಗುತ್ತಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಬಡವರಿಗೆ ಆರ್ಥಿಕ ಬೆಂಬಲ ನೀಡಿ ಸ್ವಾವಲಂಬನೆಯ ಬದುಕಿಗೆ ದಾರಿ ಮಾಡಿಕೊಟ್ಟಿವೆ ಎಂದರು.
ಕಾಂಗ್ರೆಸ್ ಮುಖಂಡರಾದ ಸುಶೀಲಾ, ಕಾಮಾಕ್ಷಿಗೌಡ, ವಿಷ್ಣುಪ್ರಿಯ, ಪ್ರದೀಪ್‌ಕುಮಾರ್, ಬಸವರಾಜು, ಪ್ರಮೋದ್, ಚಂದ್ರು ಇದ್ದರು.