ಜಿಲ್ಲೆ

ಸಮಾಜದಿಂದಲೇ ಪರಿವರ್ತನೆ ಸಾಧ್ಯ

kumarvrl

ಬೆಂಗಳೂರು: ಪರಿವರ್ತನೆ ಎಂಬುದು ಸಮಾಜದಿಂದ ಉಂಟಾಗುತ್ತದೆಯೇ ಹೊರತು ರಾಜಕೀಯದಿಂದ ಅಲ್ಲ. ಕುಟುಂಬ, ಸಮಾಜವನ್ನು ಸಂಘಟಿಸಿ ಉತ್ತಮ ಸಂಸ್ಕಾರ ನೀಡುವುದರಿಂದ ಪರಿವರ್ತನೆ ಸಾಧ್ಯ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಆರ್​ಎಸ್​ಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತ ನಾಡಿದರು. ಬೂತ್ ಮಟ್ಟದಲ್ಲಿ ಪ್ರದೇಶಗಳನ್ನು ವಿಂಗಡಿಸಿ ಕಾರ್ಯಕರ್ತರ ನಿಯೋಜನೆ ಮಾಡ ಲಾಗಿದೆ. ಆದರೂ ನಮ್ಮದು ರಾಜಕೀಯ ಉದ್ದೇಶಕ್ಕೆ ಕೆಲಸ ಮಾಡುವ ಸಂಘಟನೆಯಲ್ಲ. ನೆರೆಹೊರೆ ಜತೆ ನಿರಂತರ ಸಂವಹನ, ಸಮಾಜಕ್ಕೆ ಕುಟುಂಬದಿಂದ ನೀಡಬೇಕಾದ ಕೊಡುಗೆಗಳ ಬಗ್ಗೆ ಚಿಂತನೆ ನಡೆಸಬೇಕು. ಪ್ರತಿಯೊಬ್ಬರಲ್ಲೂ ಈ ಮನೋಭಾವ ಮೂಡಿದಾಗ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ. ಈ ಕಾರ್ಯದಲ್ಲಿ ವಯಸ್ಸು, ಲಿಂಗದ ಭೇದವಿಲ್ಲದೆ ಎಲ್ಲರನ್ನೂ ತೊಡಗಿಸಿಕೊಳ್ಳಬೇಕು ಎಂದರು.

ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್, ಪ್ರಾಂತ ಸಂಘಚಾಲಕ ಮ. ವೆಂಕಟರಾಮು, ಬೆಂಗಳೂರು ಮಹಾನಗರ ಸಂಘಚಾಲಕ ಡಾ. ಎಂ.ಕೆ. ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.