ಶಿವಮೊಗ್ಗ: ಎನ್.ಟಿ.ರಸ್ತೆಯಲ್ಲಿ ನಡುರಾತ್ರಿ ಡ್ರಾಪ್ ಕೇಳುವ ನೆಪದಲ್ಲಿ ಕಾರು ಹತ್ತಿ ಚಾಲಕನಿಂದ ಚಿನ್ನದ ಸರ ದರೋಡೆ ಮಾಡಿ ಪರಾರಿಯಾಗಿದ್ದ ತೃತೀಯಲಿಂಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರ್.ಎಂ.ಎಲ್ ನಗರದ ರವಿ ಅಲಿಯಾಸ್ ಸ್ವೀಟಿ ಬಂಧಿತ ತೃತೀಯಲಿಂಗಿ. ವಿನೂತ್‌ಕುಮಾರ್ ಎಂಬುವರು ಶನಿವಾರ ತಡರಾತ್ರಿ ಕಾರಿನಲ್ಲಿ ಕಾರಿನಲ್ಲಿ ಒಬ್ಬರೇ ಎನ್‌ಟಿ ರಸ್ತೆಯಲ್ಲಿ ಹೊರಟಿದ್ದರು. ಈ ವೇಳೆ ಡ್ರಾಪ್ ಕೇಳುವ ನೆಪದಲ್ಲಿ ಕಾರು ಹತ್ತಿದ್ದ ಸ್ವೀಟಿ ಸ್ವಲ್ಪ ದೂರ ತೆರಳುತ್ತಿದ್ದಂತೆ ಚಾಕು ತೆಗೆದು ಬೆದರಿಸಿ 92 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಘಟನೆ ಸಂಬಂಧ ವಿನೂತ್‌ಕುಮಾರ್ ಅವರು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸ್ವೀಟಿ ಎಂಬುವರನ್ನು ಬಂಧಿಸಿದ್ದಾರೆ. ಆಕೆ ಬಳಿ ಇದ್ದ 92 ಸಾವಿರ ರೂ. ಮೌಲ್ಯದ ಬಂಗಾರದ ಸರವನ್ನು ವಶಕ್ಕೆ ಪಡೆಯಲಾಗಿದೆ. ದೊಡ್ಡಪೇಟೆ ಇನ್ಸ್‌ಪೆಕ್ಟರ್ ಅಂಜನ್‌ಕುಮಾರ್, ಪಿಎಸ್‌ಐ ವಸಂತ್, ಪ್ರೊ. ಡಿವೈಎಸ್ಪಿ ಮಂಜುನಾಥ್, ಸಿಬ್ಬಂದಿ ಚಂದ್ರಶೇಖರ್, ಲಚ್ಚಾನಾಯ್ಕ, ಚಂದ್ರನಾಯ್ಕ, ನಿತಿನ್, ರಮೇಶ ಅವರ ತಂಡ ಆರೋಪಿಯನ್ನು ಬಂಧಿಸಿದೆ.