ಬೆಂಗಳೂರು: ಬಿಬಿಎಂಪಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಹಾಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ ಎಂಬ ಆಕ್ಷೇಪ ಕೇಳಿಬಂದಿರುವ ಬೆನ್ನಲ್ಲೇ, ಕಂದಾಯ ಪರವೀಕ್ಷಕರೊಬ್ಬರು ತಮ್ಮ ಮೇಲಿರುವ ಕಾರ್ಯದೊತ್ತಡ ನಿವಾರಿಸಬೇಕು ಇಲ್ಲವೇ ಸ್ವಯಂನಿವೃತ್ತಿ (ವಿಆರ್‌ಎಸ್) ನೀಡುವಂತೆ ಮನವಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪೂರ್ವ ವಲಯದ ಎಚ್‌ಬಿಆರ್ ಉಪವಿಭಾಗದಲ್ಲಿ ಕಂದಾಯ ಪರಿವೀಕ್ಷಕರಾಗಿ ಕೆಲಸ ಮಾಡುತ್ತಿರುವ ಹೇಮಂತ್‌ಕುಮಾರ್ ಅವರು ತಮ್ಮ ಮೇಲೆ ಭಾರಿ ಕಾರ್ಯದೊತ್ತಡ ಇದೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆರೋಗ್ಯ ಹದೆಗೆಡುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ತನಗೆ ಬೇರೆ ವಿಭಾಗದಲ್ಲಿ ಸಮಾನ ಹುದ್ದೆ ನೀಡಬೇಕು. ಇದು ಸಾಧ್ಯವಾಗದಿದ್ದಲ್ಲಿ ವಿಆರ್‌ಎಸ್ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರಿಗೆ (ಆಡಳಿತ) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಇಂಥದ್ದೊಂದು ಪತ್ರ ಬುಧವಾರ ವಿಶೇಷ ಆಯುಕ್ತ (ಆಡಳಿತ) ಕಚೇರಿ ತಲುಪಿದ್ದು, ನೌಕರನ ಅಹವಾಲು ನೋಡಿ ಅಧಿಕಾರಿ ವರ್ಗ ಅವಕ್ಕಾಗಿದ್ದಾರೆ. ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಳ್ಳದು ಆಡಳಿತ ವಿಭಾಗವು ಪತ್ರದ ಕುರಿತು ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಸಿಬ್ಬಂದಿಯ ಮನವಿ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.
ನೌಕರರ ಸಂಘದಿಂದಲೂ ಮನವಿ:
ಇದೇ ವಿಷಯವಾಗಿ ಪಾಲಿಕೆಯ ಅಧಿಕಾರಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಎ.ಅಮೃತರಾಜ್ ಅವರು ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ನೌಕರರ ಮೇಲೆ ಅನಗತ್ಯವಾಗಿ ಒತ್ತಡ ಹಾಕುತ್ತಿರುವುದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು. ಈ ಸಂಬಂಧ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಿದ್ದರು.
ಹೆಚ್ಚು ಕೆಲಸ ಮಾಡಬೇಕೆಂದಿದ್ದ ಅಧಿಕಾರಿ:
ಈ ವಿಚಾರವಾಗಿ ಕಳೆದ ತಿಂಗಳ 23ರಂದು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಕಂದಾಯ ವಿಭಾಗದ ಅಧಿಕಾರಿ/ಸಿಬ್ಬಂದಿಗಳಿಗೆ ಚುನಾವಣಾ ಸಂಬಂಧಿ ಕೆಲಸವನ್ನು ಹೆಚ್ಚುವರಿಯಾಗಿ ನೀಡಿರುವುದರಿಂದ ಉದ್ಯೋಗಿಗಳು ಕಾರ್ಯದೊತ್ತಡಕ್ಕೆ ಒಳಗಾಗಿರುವುದದನ್ನು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್.ರಾಮಚಂದ್ರನ್ ಅವರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು, ಪಾಲಿಕೆಯಲ್ಲಿ ಎಲ್ಲ ವಿಭಾಗಗಳಲ್ಲೂ ಕೆಲಸದ ಒತ್ತಡ ಇದೆ. ಇದನ್ನು ಸರಿದೂಗಿಸಿಕೊಂಡು ಹೋಗಬೇಕಿದೆ. ತಮ್ಮ ವಿಭಾಗಗಳ ಕೆಲಸದ ಜತೆಗೆ ಚುನಾವಣಾ ಕಾರ್ಯವನ್ನೂ ಮಾಡಬೇಕಾಗಿದೆ. ಸಮಯ ಹೊಂದಿಸಿಕೊಂಡು ಕೆಲಸ ಮಾಡಬೇಕಿದೆ ಅಷ್ಟೇ ಎಂದು ಸಮಜಾಯಿಸಿ ನೀಡಿದ್ದರು.