ಜಿಲ್ಲೆ

ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯ ಕೆಲ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.


ರಾಜ್ಯ ಆಡಳಿತ ಸೇವೆ ಅಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.


ಮೈಸೂರು ಉಪವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಅವರನ್ನು ಹಾಸನ ಉಪವಿಭಾಗಾಧಿಕಾರಿ ಸ್ಥಾನಕ್ಕೆ ವರ್ಗಾಯಿಸಲಾಗಿದ್ದು, ಇವರ ಸ್ಥಾನಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.


ಪಾಲಿಕೆಯ ಉಪ ಆಯುಕ್ತ(ಕಂದಾಯ) ಎಂ.ದಾಸೇಗೌಡ ಅವರನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ-1 ಸ್ಥಾನಕ್ಕೆ ವರ್ಗಾಹಿಸಲಾಗಿದೆ. ಅಲ್ಲಿದ್ದ ಕೆ.ಆರ್.ಸುಜಾತಾ ಅವರನ್ನು ಪಾಲಿಕೆ ಉಪ ಆಯುಕ್ತ ಹುದ್ದೆಗೆ ನಿಯೋಜಿಸಲಾಗಿದೆ.


ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಆರ್.ರಂಗಸ್ವಾಮಿ ಅವರನ್ನು ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಟಿ.ಎನ್.ಕೃಷ್ಣಮೂರ್ತಿ ಅವರನ್ನು ನಿಯುಕ್ತಗೊಳಿಸಲಾಗಿದೆ. ಲೋಕಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರ್ಗಾವಣೆಗೊಂಡಿರುವ ಅಧಿಕಾರಿಗಳು ಯಾವುದೇ ಚಲನಾದೇಶವಿಲ್ಲದೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗಳಲ್ಲಿ ಕಾರ್ಯ ವರದಿ ಮಾಡಿಕೊಳ್ಳಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.