ಜಿಲ್ಲೆ

ಸಾಗುವಳಿ ಪತ್ರ ಇದ್ದರೂ ಪಹಣಿಯಲ್ಲಿ ಹೆಸರಿಲ್ಲ

ಎನ್.ವೆಂಕಟೇಶ್

ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ರೈತರ ಆಕ್ರೋಶ ಭರವಸೆಯಷ್ಟೇ ಉತ್ತರ, ಪರಿಹಾರವಿಲ್ಲ

ಮಂಚೇನಹಳ್ಳಿ: ಸುಮಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಭೂ ಹಕ್ಕು ಮಂಜೂರಾತಿ ಪಡೆಯುವುದಕ್ಕಾಗಿ ನಮೂನೆ 53, 57ರಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಈ ಪೈಕಿ ಕೆಲವರಿಗೆ ಸಾಗುವಳಿ ಚೀಟಿ ನೀಡಿದ್ದರೂ ಪಹಣಿಗಳಲ್ಲಿ ಹೆಸರು ಬರುತ್ತಿಲ್ಲ. ಯಾರನ್ನು ಕೇಳಿದರೂ ಭರವಸೆ ನೀಡುತ್ತಾರೆಯೇ ಹೊರತು ಪರಿಹಾರ ಒದಗಿಸುತ್ತಿಲ್ಲ ಎಂದು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪಿಳ್ಳೇಕಮ್ಮ ಭವನದ ಬಳಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಅಧ್ಯಕ್ಷ ಹಾಗೂ ವಕೀಲ ಎಂ.ಆರ್.ಲಕ್ಷ್ಮೀನಾರಾಯಣ್ ಮಾತನಾಡಿ, ಸುಮಾರು ಏಳು ವರ್ಷಗಳ ಹಿಂದೆಯೇ ಬಗರ್‌ಹುಕುಂ ಸಮಿತಿ ರಚಿಸಲಾಗಿತ್ತು. ಇದರಲ್ಲಿ ಮಂಚೇನಹಳ್ಳಿ ಭಾಗದ 103 ಫಲಾನುಭವಿಗಳ ಪೈಕಿ 82 ಫಲಾನುಭವಿಗಳಿಗೆ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ. ಆದರೂ ಏಳು ವರ್ಷಗಳಿಂದ ಇನ್ನೊಂದು ಕಮಿಟಿ ರಚಿಸಿ, ಪಹಣಿ ಕೊಡಿಸುವ ಕೆಲಸ ಮಾಡದೆ ಮೀನಮೇಷ ಎಣಿಸಲಾಗುತ್ತಿದೆ ಎಂದು ದೂರಿದರು.

ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ, ರೈತರಾದ ಕೆ.ಪಿ.ನರಸಿಂಹಮೂರ್ತಿ, ಲಕ್ಷ್ಮೀನಾರಾಯಣ್, ಬಾಲಗಂಗಾಧರ, ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಸೌಭಾಗ್ಯಮ್ಮ, ಸಂತೋಷ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಅರ್ಹರಿಗೆ ಅನ್ಯಾಯವಾಗದಿರಲಿ

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಂತಹ ರೈತರ ಬಗ್ಗೆ ಗಮನಹರಿಸದೆ ತಮ್ಮ ಪಾಡಿಗೆ ಇದ್ದಾರೆ. ಈಗ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಡಿ-ಫಾರೆಸ್ಟ್ ಎಂಬ ಪಟ್ಟ ಕಟ್ಟಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಏಳು ವರ್ಷಗಳ ಹಿಂದೇಯೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದು ರೈತರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಲಕ್ಷ್ಮೀನಾರಾಯಣ್ ಗುಡುಗಿದರು. ಸರ್ಕಾರವು ಇನ್ನಾದರೂ ಅರ್ಹ ರೈತರಿಗೆ, ಅನ್ನದಾತರಿಗೆ ಮೋಸ ಮಾಡದೆ ಪರಿಶೀಲಿಸಿ ಜಮೀನನ್ನು ಅವರ ಹೆಸರಿಗೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಮಹಿಳೆಯ ಅಳಲು

ತಾಲೂಕಿನ ಅಲಾಸ್ತಿಮೇನಹಳ್ಳಿಯ ನಾಗಮ್ಮ ಮಾತನಾಡಿ, ಸುಮಾರು ವರ್ಷಗಳಿಂದ ಸರ್ವೇ ನಂ.38ರ ಮೂರು ಎಕರೆ ಜಮೀನಲ್ಲಿ ಬೆಳೆ ಬೆಳೆದು ಬದುಕು ಸಾಗಿಸುತ್ತಿದ್ದೇವೆ. ಇತ್ತೀಚೆಗೆ ಅಕ್ಕಪಕ್ಕದ ಜಮೀನಿನವರು ಅರ್ಧ ಎಕರೆ ಜಮೀನನ್ನು ಬೇರೆಯವರಿಗೆ ಮಾರಿದ್ದರು. ಅದನ್ನು ಖರೀದಿಸಿದವರು ಈಗ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಮದ್ಯಪಾನ ಮಾಡಿ ಇದು ನಿಮ್ಮ ಜಮೀನಲ್ಲ ಎಂದು ಜಗಳ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕೆಂದು ಅಳಲು ತೋಡಿಕೊಂಡರು.