ಜಿಲ್ಲೆ

ವರ್ಗಾವಣೆ ಆಡಳಿತಕ್ಕೆ ಸಮಸ್ಯೆಯಾಗದಿರಲಿ

ಪ್ರಶಾಂತ ಹೂಗಾರ

ಹುಕ್ಕೇರಿ: ಪಟ್ಟಣ, ಮದಮಕ್ಕನಾಳ, ಎಲಿಮುನ್ನೋಳಿ ಕ್ರಾಸ್‌ನ ಬಾಪೂಜಿ ಸ್ಕೂಲ್ ಹತ್ತಿರದ ರಸ್ತೆ ಬದಿಯಲ್ಲಿ ಇರುವ ಬಾವಿಗಳಿಗೆ ರಕ್ಷಣಾ ಗೋಡೆ ನಿರ್ಮಾಣ, ಹುಕ್ಕೇರಿ ಬಸವ ವೃತ್ತದಿಂದ ಬೆಳವಿಗೆ ಹೋಗುವ ರಸ್ತೆ ಬದಿಯ ಗಿಡಗಂಟೆಗಳನ್ನು ಕೂಡಲೇ ಸ್ವಚ್ಛತೆ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಶಾಸಕ ನಿಖಿಲ ಕತ್ತಿ ಸೂಚಿಸಿದರು.

ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಬಿತ್ತನೆ ಬೀಜ ಹಾಗೂ ದಾಸ್ತಾನು ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಾಲೂಕಾಡಳಿತದ ಕೆಲ ಅಧಿಕಾರಿಗಳು ನಿಯೋಜನೆ ಮೇಲೆ ತೆರಳುತ್ತಿರುವುದಕ್ಕೆ ಆಕ್ಷೇಪಿಸಿದರು. ಆಡಳಿತಕ್ಕೆ ಸಮಸ್ಯೆ ಆಗದಂತೆ ವರ್ಗಾವಣೆ ಕೈಗೊಳ್ಳಲು ತಿಳಿಸಿದರು.

ಕೊಟಬಾಗಿ ಏತ ನೀರಾವರಿ ನೀರನ್ನು ಕೆಲ ಗ್ರಾಮಗಳ ರೈತರು ತಡೆದು ತಾವು ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹುಲ್ಲೋಳಿ, ಹಟ್ಟಿ ಗ್ರಾಮದ ರೈತರು ಆಕ್ಷೇಪಿಸುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಶೀಘ್ರ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು. ರೈತರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿಗೆ ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಮತ್ತು ಅಪಘಾತ ಸಂಭವಿಸುತ್ತಿವೆ ಎಂದು ಜನರು ದೂರಿದರು. ಒಳಚರಂಡಿ ಕಾಮಗಾರಿ ಕೈಗೊಳ್ಳುವವರನ್ನು ಮತ್ತು ಪುರಸಭೆ ಅಧಿಕಾರಿಗಳನ್ನು ಕರೆಸಿ ಈಗ ಮಾಡಿರುವ ಕಾಮಗಾರಿಯ ರಸ್ತೆಗಳ ತಗ್ಗು ಗುಂಡಿ ಮರು ಭರ್ತಿ ಮಾಡಬೇಕು. ಅಲ್ಲಿಯವರೆಗೆ ಬೇರೆ ಕಾಮಗಾರಿ ಕೈಗೊಳ್ಳದಂತೆ ನಿಗಾ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮತ್ತು ಅಭಿಯಂತಗೆ ಆದೇಶಿಸಿದರು.

ನಡೆದಾಡುವ ಕಂಪ್ಯೂಟರ್ ಎಂದು ಹೆಸರು ಮಾಡಿರುವ ಅಥಣಿಯ ಬಸವರಾಜ ಉಮರಾಣಿ ಸಮಸ್ಯೆ ಆಲಿಸಿ ಸರ್ಕಾರದಿಂದ ದೊರಕುವ ಸೌಲಭ್ಯ ಒದಗಿಸುವ ಭರವಸೆ ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಮುಖಂಡರಾದ ಸತ್ತೆಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಎ.ಕೆ.ಪಾಟೀಲ, ಸುನೀಲ ಬೈರಣ್ಣವರ, ಕೆಂಪಣ್ಣ ದೇಸಾಯಿ, ಎಚ್.ಎಲ್.ಪೂಜೇರಿ, ರವಿ ಪಾಟೀಲ, ಪಾಂಡುರಂಗ ಖೋತ, ಬಿ.ಕೆ.ಮಗೆಣ್ಣವರ, ರಾಜು ಮುನ್ನೋಳಿ, ಭೀಮಗೌಡ ಗಿರಿಗೌಡನವರ, ಶೀತಲ ಬ್ಯಾಳಿ, ಚನ್ನಪ್ಪ ಗಜಬರ ಇತರರಿದ್ದರು.21-1