ಚನ್ನರಾಯಪಟ್ಟಣ ಪುರಸಭೆ ವತಿಯಿಂದ ಅಂತೋನಿ ರಾಜ್ ಅವರನ್ನು ಅಭಿನಂದಿಸಲಾಯಿತು. ಸಿ.ಎನ್.ಮೋಹನ್, ಕವಿತಾರಾಜು, ಎಸ್.ಎ.ಗಣೇಶ್, ಬನಶಂಕರಿ ರಘು, ಆರ್.ಯತೀಶ್ ಕುಮಾರ್ ಇದ್ದರು.  
ಜಿಲ್ಲೆ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸಿ

ಶಿವಶಂಕರ್ ಎಂ. ಹೆಬ್ಬಳ್ಳ

ಚನ್ನರಾಯಪಟ್ಟಣ : ಪಟ್ಟಣದ ಉದ್ಯಾನಗಳ ಅಭಿವೃದ್ಧಿಗೆ ಕೆನರಾ ಬ್ಯಾಂಕ್ ತನ್ನ ಸಿಎಸ್‌ಆರ್ ಅನುದಾನದಡಿ 15 ಲಕ್ಷ ರೂ. ನೀಡುವ ಭರವಸೆ ನೀಡಿದೆ ಎಂದು ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್ ತಿಳಿಸಿದರು.

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುರಸಭೆಗೆ ಸಾರ್ವಜನಿಕರು ಪಾವತಿಸುವ ಮನೆ ಕಂದಾಯ ಸೇರಿದಂತೆ ಪುರಸಭೆ ಮಳಿಗೆಗಳ ಬಾಡಿಗೆ ಪಾವತಿ ಸಂಪೂರ್ಣ ವ್ಯಾಪಾರ ವಹಿವಾಟು ಕೆನರಾ ಬ್ಯಾಂಕಿನಲ್ಲಿ ನಡೆಯುತ್ತಿತ್ತು. ಮಾಸಿಕ ಕೋಟ್ಯಂತರ ರೂ. ವ್ಯವಹಾರವನ್ನು ಮಾಡುತ್ತಿದ್ದು ಪುರಸಭೆಯಿಂದ ಕೆನರಾ ಬ್ಯಾಂಕ್‌ನಲ್ಲಿ 9 ಖಾತೆಗಳಿಂದ 12 ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಸಲಾಗುತ್ತಿದೆ. ಈಗಾಗಲೇ ಪುರಸಭೆ ವತಿಯಿಂದ ಪುರಸಭಾ ಅಧಿಕಾರಿಗಳ ಅನುಕೂಲಕ್ಕಾಗಿ 12 ಲಕ್ಷ ರೂ. ವೆಚ್ಚದ ಮಹೇಂದ್ರ ಬೋಲೆರೊ ವಾಹನವನ್ನು ನೀಡಲಾಗಿದೆ. ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ 15 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ವಿದ್ಯಾರ್ಥಿವೇತನ ನೀಡಲು ಬ್ಯಾಂಕ್ ಮುಂದೆ ಬಂದಿದೆ. ಸಾರ್ವಜನಿಕರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಆರ್ಥಿಕ ವಹಿವಾಟು ನಡೆಸುವ ಮೂಲಕ ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬ್ಯಾಂಕಿನ ಹಿರಿಯ ಅಧಿಕಾರಿ ಲಕ್ಷ್ಮೀ ಸರಸ್ಪತಿ ಮಾತನಾಡಿ, ಜಿಲ್ಲೆಯಲ್ಲೇ ಚನ್ನರಾಯಪಟ್ಟಣ ತಾಲೂಕು ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಇಲ್ಲಿನ ಸ್ವ ಸಹಾಯ ಸಂಘಗಳಿಗೆ ಬ್ಯಾಂಕಿನಿಂದ ತರಬೇತಿ ನೀಡಲಾಗುವುದು. 10 ವರ್ಷದ ಹಿಂದಿನ ಖಾತೆಗಳಿಗೆ ಕಡ್ಡಾಯವಾಗಿ ನಾಮನಿರ್ದೇಶನ ಹಾಗೂ ಕೆವೈಸಿ ಅಪ್ಡೇಟ್ ಮಾಡಿಸಬೇಕೆಂದರು.

ಬ್ಯಾಂಕಿನ ಎಜಿಎಂ ಅಂತೋನಿರಾಜ ಮಾನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 700 ಕೋಟಿ ರೂ. ಸಾಲಸೌಲಭ್ಯ ನೀಡಿದ್ದು 4 ತಿಂಗಳಿಂದ 200 ಕೋಟಿ ರೂ. ಸಾಲ ನೀಡಿದ್ದೇವೆ. ಸ್ವ ಸಹಾಯ ಸಂಘಗಳಿಗೆ 40 ಕೋಟಿ ರೂ. ಸಾಲ ನೀಡಿದ್ದು ಇನ್ನೂ ಹಲವಾರು ರೀತಿಯ ಸಾಲ ಸೌಲಭ್ಯಗಳು ಲಭ್ಯವಿದೆ. ಅರ್ಹರು ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ಬ್ಯಾಂಕಿನ ಎಜಿಎಂ ಅಂತೋನಿ ರಾಜ್ ಅವರನ್ನು ಪುರಸಭೆ ವತಿಯಿಂದ ಗೌರವಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಕವಿತಾರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್, ಸದಸ್ಯರಾದ ಧರಣೇಶ್, ಯೋಗೇಶ್, ಇಲಿಯಾಜ್, ರವಿ, ಬನಶಂಕರಿ ರಘು, ಮುಖ್ಯಾಧಿಕಾರಿ ಆರ್. ಯತೀಶ್‌ಕುಮಾರ್, ಶಾರದಮ್ಮ, ಕೆನರಾ ಬ್ಯಾಂಕ್ ಶಾಖಾ ಮುಖ್ಯ ವ್ಯವಸ್ಥಾಪಕ ವಿ.ಕೆ.ನಿಖಿಲ್, ಸಹಾಯಕ ವ್ಯವಸ್ಥಾಪಕ ಸಚಿನ್ ಜಮಾದರ್ ಸೇರಿದಂತೆ ಪುರಸಭೆ ಮತ್ತು ಬ್ಯಾಂಕ್ ನ ಸಿಬ್ಬಂದಿ ಭಾಗವಹಿಸಿದ್ದರು.