ಕಾರವಾರ: ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರತಿಯೊಬ್ಬ ಪೌರ ಕಾರ್ಮಿಕರು ಯೋಧರಿದ್ದಂತೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ.ಸಂತೋಷ ಹೇಳಿದರು.
ಕಾರವಾರ ನಗರಸಭೆಯ ಪೌರ ಕಾರ್ಮಿಕರಿಗೆ ಘನ. ತ್ಯಾಜ್ಯ ವಿಲೇವಾರಿ ಕುರಿತು ನಗರಸಭೆ ಸಭಾಭವನದಲ್ಲಿ ತರಬೇತಿ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಿ ಅವರು ಮಾತನಾಡಿದರು.
ತಾವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ನಗರವನ್ನು ಸುಂದರವಾಗಿಸುವುದರ ಜೊತೆಗೆ ಜನರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ. ಮಲೇರಿಯಾ, ಡೆಂಘೆಯಂತಹ ಸೊಳ್ಳೆಯಿಂದ ಉತ್ಪತ್ತಿಯಾಗುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ಪೌರಕಾರ್ಮಿಕರ ಕೊಡುಗೆಯನ್ನು ಶ್ಲಾಘಿಸಿದರು.
ಉಪ ಪರಿಸರ ಅಧಿಕಾರಿ, ಡಾ. ಗಣಪತಿ ಹೆಗಡೆ, ಮಾತನಾಡಿ,ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ವೇಳೆಯಲ್ಲಿ ಮಿಶ್ರಿತ ಕಸವನ್ನು ಸಂಗ್ರಹಿಸದೇ, ಹಸಿ ಕಸ (ಆಹಾರ ಪದಾರ್ಥಗಳು, ತರಕಾರಿ ಮತ್ತು ಹಣ್ಣಿನ ಸಿಪ್ಪೆಗಳು ಇತ್ಯಾದಿ ಕೊಳೆಯುವ ವಸ್ತುಗಳು) ಹಾಗೂ ಒಣ ಕಸ (ಬಾಟಲಿಗಳು, ಡಬ್ಬಿಗಳು, ಬಟ್ಟೆ, ಪ್ಲಾಸ್ಟಿಕ್, ಗಾಜು ಲೋಹಗಳು, ಕಾಗದ ಇತ್ಯಾದಿ ಒಣ ವಸ್ತುಗಳು) ವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ.
ಒಂದು ವೇಳೆ ಮಿಶ್ರಿತ ಕಸವನ್ನು ಸಂಗ್ರಹಿಸಿದ್ದಲ್ಲಿ ಅದನ್ನು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪುನಃ ವಿಂಗಡಿಸುವುದು ಮತ್ತು ಇದರಿಂದ ಇರುವ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಕಷ್ಟಸಾಧ್ಯ. ಈ ಬಗ್ಗೆ ಸಾರ್ವಜನಿಕರಿಗೂ ಅರಿವು ಮೂಡಿಸಬೇಕು. ಒಮ್ಮೆ ಕಾರ್ಮಿಕರ ಮಾತು ಕೇಳದೇ ಇದ್ದಲ್ಲಿ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಎಂದು ಕರೆ ನೀಡಿದರು.
ಘನ ತ್ಯಾಜ್ಯ ವಿಲೇವಾರಿಯಲ್ಲಿ ಸಾರ್ವಜನಿಕರು ಸಹಕಾರ ನೀಡದೇ ಹೋದರೆ, ಅವರಿಗೆ ದಂಡ ವಿಧಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ನಗರಸಭೆಯ ಎಇಇ ಸದಾನಂದ ಆರ್.ಸಾಲೆಹಿತ್ತಲ, ಹಿರಿಯ ಆರೋಗ್ಯ ನಿರೀಕ್ಷಕ ಯಾಕುಬ ಶೇಖ್, ಲೆಕ್ಕಪಾಲಕ ಮಂಜುನಾಥ ಇದ್ದರು.