ಜಿಲ್ಲೆ

ದಕ್ಷತೆಯಿಂದ ಕೆಲಸ ಮಾಡದಿದ್ದರೆ ವೇತನ ಕಡಿತ: ಜಿಪಂ ಸಿಇಒ ಕೆ.ಆರ್.ನಂದಿನಿ ಎಚ್ಚರಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಲಿ ಎಂಬ ಉದ್ದೇಶದಿಂದ ತರಬೇತಿ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಸೇವೆ ಸಲ್ಲಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಪಂ ವ್ಯಾಪ್ತಿಯ ಸಿ ಗುಂಪಿನ ಸಿಬ್ಬಂದಿ ವರ್ಗದವರಿಗೆ ಮಾಹಿತಿ ಹಕ್ಕು ಅಧಿನಿಯಮ-2005 ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 ಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರಿಗಾಗಿ ಆಯೋಜಿಸಲಾಗಿದ್ದ ಇ-ಪ್ರೊಕ್ಯೂರ್‌ಮೆಂಟ್ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜಿಲ್ಲಾ, ತಾಲೂಕು ಪಂಚಾಯಿತಿ ಅಧಿಕಾರಿಗಳು ದಕ್ಷತೆಯಿಂದ ಕೆಲಸ ನಿರ್ವಹಿಸದೆಯಿದ್ದಲ್ಲಿ, ಸಭೆ ಹಾಗೂ ತರಬೇತಿಗೆ ಹಾಜರಾಗದಿದ್ದರೆ 5 ದಿನದ ವೇತನ ಕಡಿತಗೊಳಿಸಲಾಗುವುದು. ಈ ಅಧಿಕಾರವನ್ನು ಜಿಪಂ ಸಿಇಒ ಹೊಂದಿದ್ದಾರೆ ಎಂದು ಎಚ್ಚರಿಸಿದರು.

ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾದ್ಯಂತ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಆ.15ರಿಂದ ಮುಟ್ಟಿನ ಕಪ್ ವಿತರಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿ ಪ್ರೌಢಶಾಲಾ ವಿದ್ಯಾರ್ಥಿನಿಯರ ಮಾಹಿತಿಯನ್ನು ಸಂಗ್ರಹಿಸಿ ಒಂದು ವಾರದೊಳಗೆ ವರದಿ ನೀಡಿ. ಮುಟ್ಟಿನ ಕಪ್ ವಿತರಣಾ ಅಭಿಯಾನವು ಜಿಲ್ಲೆಯಲ್ಲಿಯೇ ಪ್ರಥಮ ಹೆಜ್ಜೆಯಾಗಿದ್ದು, ಅಭಿಯಾನವನ್ನು ಯಶಸ್ವಿಗೊಳಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಕೈಜೋಡಿಸಿ ಸಹಕರಿಸಬೇಕು. ಒಂದು ವೇಳೆ ಅನುದಾನದಲ್ಲಿ ಹಣದ ಕೊರತೆ ಉಂಟಾದಲ್ಲಿ ಪಂಚಾಯಿತಿಗಳು ಸ್ವಂತ ನಿಧಿಯಿಂದ ಉತ್ತಮ ಗುಣಮಟ್ಟದ ಮುಟ್ಟಿನ ಕಪ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮಹಿಳೆಯರು ಕೌಶಲಯುತವಾಗಿ ಅಭಿವೃದ್ಧಿ ಹೊಂದಲು ವಿನೂತನವಾಗಿ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಕುರಿತು ಸ್ವ-ಸಹಾಯ ಗುಂಪುಗಳೊಂದಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ. ಮಹಿಳೆಯರು ಆಸಕ್ತಿ ಹೊಂದಿರುವ ಚಟುವಟಿಕೆಗಳ ಕುರಿತು 15 ದಿನದೊಳಗೆ ಮಾಹಿತಿ ನೀಡಿ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕೆಂಬ ಸದುದ್ದೇಶದಿಂದ ಜಿಲ್ಲೆಯಲ್ಲಿ ವಿವಿಧ ಕೌಶಲ ತರಬೇತಿಗಳನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ. ಸ್ವ-ಸಹಾಯ ಗುಂಪುಗಳಿಗೆ ಪಂಚಾಯಿತಿ ವ್ಯಾಪ್ತಿಯ ಸಭೆಯ ಬಗ್ಗೆ ಮಾಹಿತಿ ನೀಡಿ ಹೆಚ್ಚಾಗಿ ಭಾಗವಹಿಸಲು ತಿಳಿಸಿ ಎಂದರು.

ಜೀತವಿಮುಕ್ತಗೊಂಡ ಕುಟುಂಬದವರಿಗೆ ಪುನರ್ವಸತಿ ಹಾಗೂ ಸರ್ಕಾರದ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಸರ್ಕಾರದ 13 ದಾಖಲೆಗಳನ್ನು ವಿತರಿಸಲು ನನ್ನ ಗುರುತು ಅಭಿಯಾನವನ್ನು ಜುಲೈನಲ್ಲಿ ಆಯೋಜಿಸಲಾಗುವುದು. ಮದ್ದೂರಿನಲ್ಲಿ 85, ಮಳವಳ್ಳಿಯಲ್ಲಿ ಒಬ್ಬರು ಜೀತ ಪದ್ಧತಿಯಿಂದ ಮುಕ್ತರಾಗಿದ್ದಾರೆ ಎಂದು ವಿವರಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ಉಪಕಾರ್ಯದರ್ಶಿಗಳಾದ ಲಕ್ಷ್ಮೀ, ಎಂ.ಬಾಬು ಹಾಜರಿದ್ದರು.