ಜಿಲ್ಲೆ

ಕೂಸಿನ ಮನೆ ಕೂಲಿಕಾರರ ಪಾಲಿನ ವರದಾನ: ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಳವಳ್ಳಿ: ಕೂಸಿನ ಮನೆ ನರೇಗಾ ಕೂಲಿಕಾರರ ಪಾಲಿನ ವರದಾನ ಎಂದು ತಾಲೂಕು ಪಂಚಾಯಿತಿ ಇಒ ಎಚ್.ಜಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಕೂಸಿನ ಮನೆಯ ಮಕ್ಕಳನ್ನು (ಕೇರ್ ಟೇಕರ್ಸ್) ಆರೈಕೆ ಮಾಡುವವರಿಗೆ ಎರಡನೇ ಹಂತದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಮಕ್ಕಳ ಪೌಷ್ಟಿಕ, ಬೌದ್ಧಿಕತೆ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಯನ್ನು ನೋಡಿಕೊಳ್ಳುವುದು ಆರೈಕೆದಾರರ ಮೇಲೆ ಇರುತ್ತದೆ ಎಂದು ಹೇಳಿದರು.

ತರಬೇತಿಯಲ್ಲಿ ಎಲ್ಲರೂ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ತರಬೇತುದಾರರು ನೀಡುವ ಎಲ್ಲಾ ಜ್ಞಾನವನ್ನು ಪಡೆದುಕೊಂಡು ಮಕ್ಕಳ ಲಾಲನೆ-ಪಾಲನೆ ಉತ್ತಮವಾಗಿ ಮಾಡಬೇಕು. ಕೂಸಿನ ಮನೆಗೆ ಬರುವ ಮಕ್ಕಳನ್ನು ಆರೈಕೆ ಮಾಡುವಾಗ ಯಾವುದೇ ಭೇದಭಾವ ಮಾಡದೇ ಒಂದೇ ತಾಯಿ ಮಕ್ಕಳೆಂದು ಭಾವಿಸಿ ನೋಡಿಕೊಳ್ಳುವ ಜವಾಬ್ದಾರಿಯು ಕೂಸಿನ ಮನೆ ಆರೈಕೆದಾರರ ಮೇಲಿದೆ ಎಂದು ಹೇಳಿದರು.

ಆರೈಕೆದಾರರಿಗೆ ತಾಯಿಯ ವಾತ್ಸಲ್ಯ ಮುಖ್ಯವಾಗಿರಬೇಕು, ಮಹಿಳೆಯರ ಸಬಲೀಕರಣದ ಜತೆಗೆ ಮಕ್ಕಳ ಲಾಲನೆ, ಪಾಲನೆಗೆ ಕೂಸಿನ ಮನೆಗಳು ಸಹಾಯಕಾರಿಯಾಗಿವೆ. ನರೇಗಾದಡಿ ಕೂಲಿ ಕೆಲಸ ಮಾಡುವವರಿಗೆ ಕೂಸಿನ ಮನೆಗಳು ವರದಾನವಾಗಿವೆ. ಯೋಜನೆಯ ಯಶಸ್ಸಿನಲ್ಲಿ ಆರೈಕೆದಾರರ ಪಾತ್ರ ಪ್ರಮುಖವಾಗಿದೆ. ಅದಕ್ಕಾಗಿ ತರಬೇತಿ ಪಡೆದ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಂದರು.

ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ, ಶೈಲಜಾ, ಕಾರ್ಯದರ್ಶಿ ಸುಹಾಸ್, ತಾಲೂಕು ಐಇಸಿ ಸಂಯೋಜಕರ ಎಚ್.ಸುನಿಲ್ ಕುಮಾರ್, ವಿಕೇಂದ್ರೀಕೃತ ತರಬೇತುದಾರರಾದ ಶಿವಕಾಳಯ್ಯ, ಚೇತನ್ ಇತರರಿದ್ದರು.