ಜಿಲ್ಲೆ

ಬಾಲಾಪರಾಧಿಗಳ ಮನಪರಿವರ್ತನೆಗೆ ಆದ್ಯತೆ: ನ್ಯಾ. ಸೋಮನಾಥ

ಉಡುಪಿ: ಬಾಲ್ಯದಲ್ಲಿ ಬಡತನ, ಮನೆ ಪರಿಸ್ಥಿತಿ, ಜೀವನಕ್ರಮ, ಗೆಳೆಯರ ಬಳಗ ಹೀಗೆ ಅನೇಕ ಕಾರಣಗಳಿಂದ ಮಕ್ಕಳು ಅಪರಾಧ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಭವಿಷ್ಯದಲ್ಲಿ ಇಂಥ ಪ್ರವೃತ್ತಿ ಮರುಕಳಿಸದಂತೆ 3 ವರ್ಷ ರಿಮಾಂಡ್​ ಹೋಂನಲ್ಲಿ ಬಾಲಾಪರಾಧಿಗಳ ಮನಪರಿವರ್ತನೆಗೆ ಆದ್ಯತೆ ನೀಡಲಾಗುತ್ತದೆ ಎಂದು ಬಾಲನ್ಯಾಯ ಮಂಡಳಿಯ ಪ್ರಧಾನ ನ್ಯಾಯಾಧೀಶ ಸೋಮನಾಥ ಹೇಳಿದರು.

ಶುಕ್ರವಾರ ತಾಪಂ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್​ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ನಡೆದ ಬಾಲನ್ಯಾಯ ಕಾಯ್ದೆ , ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ದತ್ತು ಕಾರ್ಯಕ್ರಮ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಕುರಿತಾದ ಕಾನೂನುಗಳು ಬದಲಾದಂತೆ ಕಾನೂನಿನ ತಿಳುವಳಿಕೆಯನ್ನು ಅಧಿಕಾರಿಗಳು ಪಡೆದುಕೊಳ್ಳಬೇಕು. ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಮಕ್ಕಳ ಮೇಲೆ ಕೇಸು ದಾಖಲಾದರೆ ಉಚಿತ ಕಾನೂನು ನೆರವು ನೀಡಲಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷ ರೊನಾಲ್ಡ್​ ಬಿ ಫುಟಾರ್ಡೊ, ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣ ಕಲ್ಪಿಸುತ್ತದೆ. ಆದರೆ ಇಂದಿನ ಮಕ್ಕಳು ಪೋಷಕರೊಂದಿಗೆ ಸಮಾಲೋಚನೆ ನಡೆಸುವುದು ತೀರ ಕಡಿಮೆಯಾಗಿದೆ. ಗಂಡ&ಹೆಂಡತಿ ಮಧ್ಯೆ ಇರುವ ಸಮಸ್ಯೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ವಕೀಲ ಪ್ರಶಾಂತ್​ ಎಚ್​.ಎಂ. ಫೋಕ್ಸೋ ಮತ್ತು ಬಾಲ್ಯವಿವಾಹ, ಬಾಲನ್ಯಾಯ ಮಂಡಳಿ ಸದಸ್ಯ ರಾಜೇಶ್​ ಬಾಲನ್ಯಾಯ ಕಾಯ್ದೆ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ದ.ಕ. ಜಿಲ್ಲಾ ಅಧ್ಯಕ್ಷ ರೆನ್ನಿ ಡಿಸೋಜಾ ದತ್ತು ಅಧಿನಿಯಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಎಎಸ್​ಪಿ ಡಾ. ಸಿದ್ಧಲಿಂಗಪ್ಪ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್​ ಸ್ವಾಗತಿಸಿ, ಸುರಕ್ಷಾ ವಂದಿಸಿ, ಜ್ಯೋತಿ ನಿರೂಪಿಸಿದರು.