ಜಿಲ್ಲೆ

ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

Mysuru - Desk - Naveen Kumar H P


ಕೊಡಗು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ವಿಶೇಷ ಶ್ರಮವಹಿಸಬೇಕು ಎಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಹೇಳಿದರು.

ತಾಲೂಕಿನ ಮೂರ್ನಾಡಿನ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಣೆಗೆ ಸಂಬಂಧಿಸಿದಂತೆ ಕಾರ್ಯಾಗಾರ, ತಾಯಂದಿರ ಸಭೆ, ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ಇದಕ್ಕೆ ಪೂರ್ವ ತಯಾರಿ ಅಗತ್ಯ. ಅದರೊಂದಿಗೆ ಶಿಕ್ಷಕರು ಫಲಿತಾಂಶ ಸುಧಾರಣೆಗೆ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಹಾಗೂ ಸ್ಕೋರಿಂಗ್ ಪ್ಯಾಕೇಜ್‌ಗಳನ್ನು ಪರಿಚಯ ಮಾಡಿಸಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಪ್ರೇರೇಪಿಸಬೇಕು ಎಂದರು.


ಮೂರ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಶ್ಮಿ ಮಾತನಾಡಿ, ಕಾರ್ಯಾಗಾರದ ಪ್ರಯೋಜನವನ್ನು ಎಲ್ಲ ಶಿಕ್ಷಕರು ಪಡೆದುಕೊಂಡು ಮಕ್ಕಳ ಜ್ಞಾನ ಬೆಳೆಸಬೇಕು ಎಂದರು.


ಸಂಪನ್ಮೂಲ ವ್ಯಕ್ತಿಗಳಾಗಿ ಮೂರ್ನಾಡು ಪ್ರೌಢಶಾಲೆಯ ಕನ್ನಡ ಶಿಕ್ಷಕ ಎಸ್.ಡಿ. ಪ್ರಶಾಂತ್, ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಬಿ. ಉಷಾರಾಣಿ ಹಾಗೂ ಡಾ. ಯೋಗೇಶ್, ಮಡಿಕೇರಿ ತಾಲೂಕಿನ ವಿವಿಧ ಪ್ರೌಢಶಾಲೆಗಳ ಕನ್ನಡ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.