ಜಿಲ್ಲೆ

ನೋಡಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಸುನಿಲ್ ಪೊನ್ನೇಟಿ

ಮಡಿಕೇರಿ:

ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಮಾಹಿತಿ ನೀಡಿದರು. ಮಾದರಿ ನೀತಿ ಸಂಹಿತೆ ಜಾರಿ ಸಂಬಂದ ಅಧಿಕಾರಿಗಳು ಚುನಾವಣಾ ಆಯೋಗ ನಿಗದಿಪಡಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.

ಮಾದರಿ ನೀತಿ ಸಂಹಿತೆ ಜಾರಿ ಅವಧಿಯಿಂದ ಫಲಿತಾಂಶ ಪ್ರಕಟಿಸುವವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಅದರಂತೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.

ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ, ಈ ಬಗ್ಗೆ ವರದಿ ನೀಡಬೇಕು. ಸಾಕ್ಷ್ಯಗಳನ್ನು ಸಂಗ್ರಹಿಸಬೇಕು. ಮಾದರಿ ನೀತಿ ಸಂಹಿತೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಬೇಕು. ಸ್ವೀಪ್ ನೋಡಲ್ ಅಧಿಕಾರಿಗಳು ಸ್ವೀಪ್ ಯೋಜನೆಯನ್ನು ಸಿದ್ದಪಡಿಸಬೇಕು. ಮತದಾರರ ಜಾಗೃತಿ ಸಂಬಂಧಿಸಿದಂತೆ ಸೃಜನಾತ್ಮಕ ಚಟುವಟಿಕೆ ಹಮ್ಮಿಕೊಳ್ಳಬೇಕು. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಜೊತೆ ಮತದಾನ ಹೆಚ್ಚಳ ಸಂಬಂಧ ಅಗತ್ಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮತದಾನ ಹೆಚ್ಚಳಕ್ಕೆ ಶ್ರಮಿಸಬೇಕು. ನೈತಿಕ ಮತ್ತು ಜಾಗೃತ ಮತದಾನಕ್ಕೆ ಪ್ರೇರಣೆ ನೀಡಬೇಕು. ಮತದಾರರ ನೋಂದಣಿ, ತಿದ್ದುಪಡಿ, ವರ್ಗಾವಣೆ ಮತ್ತಿತರ ಸಂಬಂಧ ಗಮನಹರಿಸುವುದು. ವಿಶೇಷ ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಗಮನಹರಿಸಬೇಕು. ಮುಕ್ತ, ಶಾಂತಿಯುತ ಪಾರದರ್ಶಕ ಚುನಾವಣೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಲೋಕಸಭಾ ಚುನಾವಣೆ ಸಂಬಂಧ ವಿವಿಧ ನೋಡಲ್ ಅಧಿಕಾರಿಗಳ ಜವಾಬ್ದಾರಿ ಬಗ್ಗೆ ವಿವರಿಸಿದರು.
ವಿವಿಧ ವಿಭಾಗದ ನೋಡಲ್ ಅಧಿಕಾರಿಗಳಾದ ಪಿ.ಶ್ರೀನಿವಾಸ್, ಸೋಮಸುಂದರ, ಸಿದ್ದೇಶ್, ನಾಗರಾಜ ಆಚಾರ್ಯ, ಸೌಮ್ಯ, ಬಿ.ಬಸಪ್ಪ, ಪ್ರಭು, ಮಾಸ್ಟರ್ ಟ್ರೈನರ್ ಕೆ.ಸಿ.ದಯಾನಂದ, ಪ್ರಾಂಶುಪಾಲರಾದ ವಿಜಯ್, ಅಜೀತ್, ತಹಶೀಲ್ದಾರರಾದ ಕಿರಣ್ ಗೌರಯ್ಯ, ರಾಮಚಂದ್ರ, ನವೀನ್ ಕುಮಾರ್, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕರಾದ ಮಮತ, ಜಿ.ಪಂ.ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ಲೆಕ್ಕ ವಿಭಾಗದ ನೋಡಲ್ ಅಧಿಕಾರಿ ಝೀವಲ್ ಖಾನ್ ಇತರರು ಇದ್ದರು.