ಜಿಲ್ಲೆ

ದೇಶಕ್ಕಾಗಿ ಸೈನಿಕರನ್ನು ಸಜ್ಜುಗೊಳಿಸಲು ತರಬೇತಿ


ಹಾನಗಲ್ಲ: ದೇಶಕ್ಕಾಗಿ ಸೈನಿಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಅಗ್ನಿವೀರ ಆರ್ಮಿ ಉಚಿತ ಕೋಚಿಂಗ್ ಆರಂಭಿಸಿದ್ದು, ಈ ತರಬೇತಿ ಮೂಲಕ ದೇಶದ ಭದ್ರತೆಗೆ ಶಕ್ತಿ ತುಂಬುತ್ತಿರುವ ಸಮಾಧಾನ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಯುವಕರು ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಸಿದ್ದಲಿಂಗಪ್ಪ ಕಮಡೊಳ್ಳಿ ಹೇಳಿದರು.

ತಾಲೂಕಿನ ಬೆಳಗಾಲಪೇಟೆಯಲ್ಲಿ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ, ಶ್ರೀಗುರು ಕುಮಾರೇಶ್ವರಮಠ ಜೀರ್ಣೋದ್ಧಾರ ಸೇವಾ ಸಮಿತಿ, ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಪ್ರತಿಷ್ಠಾನದ ಒಂದು ತಿಂಗಳ ಅವಧಿಯ ಅಗ್ನಿವೀರ ಆರ್ಮಿ ಉಚಿತ ತರಬೇತಿಯ ಶಿಬಿರಾರ್ಥಿಗಳು ಬೆಳಗಾಲಪೇಟೆಯಿಂದ ಹಾನಗಲ್ಲ ವಿರಕ್ತಮಠದವರೆಗೆ ಹಮ್ಮಿಕೊಂಡಿದ್ದ ರಾಷ್ಟ್ರಭಕ್ತಿ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

ದೇಶದ ರಕ್ಷಣೆಗಾಗಿ ಸಮರ್ಪಿಸಿಕೊಳ್ಳುವ ಯುವಪಡೆ ಸನ್ನದ್ಧವಾಗಬೇಕಾಗಿದೆ. ದೇಶದ ಭದ್ರತೆಗಾಗಿ ಸೈನ್ಯ ಸೇರಲು ಯುವಕರು ಆಸಕ್ತರಾಗಿದ್ದಾರೆ. ಆದರೆ, ಅದಕ್ಕಾಗಿ ಇರುವ ವಿವಿಧ ಪರೀಕ್ಷೆ ಎದುರಿಸಲು ಸಿದ್ಧರಾಗಬೇಕು. ಅದಕ್ಕಾಗಿ ಈ ತರಬೇತಿ ಆಯೋಜಿಸಲಾಗಿದ್ದು, ಅದರ ಭಾಗವಾಗಿ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ. ಇದು ಅವರ ಬೆಳವಣಿಗೆಗೆ ಪೂರಕವಾದುದು ಎಂದರು.

ಅಗ್ನಿವೀರ ಆರ್ಮಿ ಕೋಚಿಂಗ್ ತರಬೇತುದಾರ ನಿವೃತ್ತ ಸೈನಿಕ ಕೆ. ರಾಘವೇಂದ್ರ ಮಾತನಾಡಿ, ದೇಶ ಕಟ್ಟುವುದರಲ್ಲಿ ಸೈನಿಕರು ಹಾಗೂ ರೈತರ ಪಾತ್ರ ಮುಖ್ಯವಾದುದು. ಸೈನಿಕರು ದೇಶ ಕಾಯುವುದೆಂದರೆ ವೈರಿಗಳನ್ನು ಸದೆಬಡಿಯುವ ಸಾಮರ್ಥ್ಯದೊಂದಿಗೆ ಹೋರಾಡಬೇಕಾಗುತ್ತದೆ. ವೈರಿಗಳನ್ನು ಸದೆಬಡಿಯಲು ಸದಾ ಮೈಯೆಲ್ಲ ಕಣ್ಣಾಗಿ ಸಿದ್ಧರಾಗಿರಬೇಕಾಗುತ್ತದೆ. ದೇಶಭಕ್ತಿಯಿದ್ದರೆ ಮಾತ್ರ ಇದು ಸಾಧ್ಯ. ನಮ್ಮ ಯುವಕರಲ್ಲಿ ಇಂತಹ ದೇಶಭಕ್ತಿ ಬಿತ್ತುವುದರ ಜತೆಗೆ ದುಶ್ಚಟಗಳಿಂದ ದೂರ ಇಡುವ ಕಾರ್ಯ ನಡೆಯಬೇಕಾಗಿದೆ. ರಾಜ್ಯದಲ್ಲಿಯೇ ಬೆಳಗಾಲಪೇಟೆಯಲ್ಲಿ ನಡೆಯುತ್ತಿರುವ ಈ ಉಚಿತ ತರಬೇತಿ ವಿಶೇಷವಾದುದು. ಇಲ್ಲಿ ತರಬೇತಿ ಪಡೆಯುತ್ತಿರುವ ಬಹುತೇಕರು ಸೈನ್ಯಕ್ಕೆ ಆಯ್ಕೆಯಾಗುವುದು ಖಚಿತ ಎಂದರು.

ಜಯಲಿಂಗಪ್ಪ ಹಳಕೊಪ್ಪದ, ಶಾಂತವೀರ ನೆಲೋಗಲ್, ಶಿವಮೂರ್ತಿ ಚಿಕ್ಕಮಠ, ಶಿವಣ್ಣ ಶಿಗ್ಗಾವಿ, ಮೌನೇಶ ಮೆಳ್ಳಾಗಟ್ಟಿ, ಮೃತ್ಯುಂಜಯ ಕೋರಿಶೆಟ್ಟರ ಇತರರು ಇದ್ದರು.