ಮೈಸೂರು: ತರಬೇತಿ ಎನ್ನುವುದು ಏನನ್ನಾದರೂ ಕಲಿಯುವ ಜತೆಗೆ ನಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಲು ನೆರವಾಗಬೇಕು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಆರ್.ರಾಜ್‌ಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಐದು ದಿನಗಳ ಕಾಲ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.
ತರಬೇತಿಯಲ್ಲಿ ವಿವಿಧ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದ್ದಾರೆ. ತರಬೇತಿ ಎಂದರೆ ಏನಾದರೂ ಕಲಿತು ಹೋಗಬೇಕು. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಈ ತರಬೇತಿಯಿಂದ ನಿಮಗೆ ಉಪಯೋಗವಾಗಿದ್ದು, ಕೌಶಲ ಹೆಚ್ಚಿದೆ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗಕ್ಕೂ ಇಲ್ಲಿಗೂ ಇರುವ ವ್ಯತ್ಯಾಸ ನಿಮಗೆ ಗೊತ್ತಾಗಿದೆ. ಇದೊಂದು ಹೊಸ ಅನುಭವವಾಗಿದೆ. ಮೈಸೂರು, ಕೊಡಗು, ಚಾಮರಾಜನಗರ ಭಾಗಗಳಲ್ಲಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.
ಈ ನಿಟ್ಟಿನಲ್ಲಿ ನೀವೆಲ್ಲರೂ ಕಾರ್ಯೋನ್ಮುಖರಾಗಬೇಕು. ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ತರಬೇತಿಗಳು ನಿರಂತರವಾಗಿ ನಡೆಯುವುದರ ಜತೆಗೆ ಆಶ್ರಮ ಶಾಲೆ ಮಕ್ಕಳಿಗೆ ಹಾಗೂ ಹಾಡಿ ಜನರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲಾ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ, ನೀವು ಉತ್ತಮ ಅಧಿಕಾರಿಯಾಗಬೇಕಾದರೆ ಗುಣಮಟ್ಟದ ತರಬೇತಿ ಪಡೆಯಬೇಕು. ಕಾಯ್ದೆಗಳನ್ನು ತಿಳಿದುಕೊಳ್ಳಬೇಕು. ಪರಿಶಿಷ್ಟ ಪಂಗಡದ ಜನರ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕು. ಇಲಾಖೆಗೆ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ.ಮಲ್ಲೇಶ್ ಮಾತನಾಡಿ, ಈ ತರಬೇತಿಯಿಂದ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದ್ದು, ತರಬೇತಿ ಎಲ್ಲ ಹಂತದ ಅಧಿಕಾರಿಗಳಿಗೂ ನಿರಂತರವಾಗಿ ನಡೆಯುತ್ತದೆ. ಯಾವುದೇ ಕೆಲಸ ಮಾಡಲು ತರಬೇತಿ ಮುಖ್ಯವಾಗಿರುವುದರಿಂದ ಈ ತರಬೇತಿ ಉಪಯುಕ್ತವಾಗಿದೆ ಎಂದು ತಿಳಿಸಿದರು.
ತರಬೇತಿ ಪಡೆದ ರಾಯಚೂರು ತಾಲೂಕು ಕಲ್ಯಾಣಾಧಿಕಾರಿ ರುಕ್ಷ್ಮಿಣಿ ಪಾಟೀಲ್ ಮಾತನಾಡಿ, ಈ ತರಬೇತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು, ವ್ಯವಸ್ಥಾಪಕರು, ನಿಲಯಪಾಲಕರಿಗೂ ನೀಡಿದರೆ ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ತರಬೇತಿಯಿಂದ ಅನುಕೂಲವಾಗಿದೆ ಎಂದರು.
ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್.ಪ್ರಭಾ ಅರಸ್, ರಾಜ್ಯ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್, ಸಂಶೋಧನಾ ಅಧಿಕಾರಿಗಳಾದ ಕೆ.ಶ್ರೀನಿವಾಸ್, ಡಾ.ಮೋಹನ್, ಡಾ.ಕುಮಾರ್, ಅರುಣ್‌ಪ್ರಭು, ಜಿ.ಆರ್.ಮಹೇಶ್, ಬಿ.ಆರ್.ಭವ್ಯಾ, ಗುಣಧರ್, ಹೇಮಚಂದ್ರ, ವೆಂಕಟೇಶ್‌ಪ್ರಸಾದ್, ಕ್ಯಾಪ್ಟನ್ ರವಿ ಶಿರಹಟ್ಟಿ, ನಾಗೇಂದ್ರ ಇತರರು ಇದ್ದರು.