ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅಂಗವಾಗಿ 91ನೇ ವಿಪತ್ತು ನಿರ್ವಹಣಾ ಸಮಿತಿಯನ್ನು ಶಾಸಕ ರಾಜೇಶ್ ನಾಕ್ ಉದ್ಘಾಟಿಸಿದರು.  
ಜಿಲ್ಲೆ

ಯುವಕರ ಸಮಾಜಮುಖಿ ಚಟುವಟಿಕೆಗೆ ಪ್ರೇರಣೆ : ಬಂಟ್ವಾಳ ಶಾಸಕ ರಾಜೇಶ್ ನಾಕ್ ಅನಿಸಿಕೆ

ಸೌಮ್ಯ ಆರ್

ಬಂಟ್ವಾಳ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಯೋಜನೆಯ ಫಲವಾಗಿ ಹುಟ್ಟಿಕೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನವಾಗಿದೆ. ಶೌರ್ಯ ವಿಪತ್ತು ತಂಡ ರಚನೆ ಗ್ರಾಮೀಣ ಭಾಗದ ಯುವಕರು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣಾದಾಯಿಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಜನಜಾಗೃತಿ ಪ್ರಾದೇಶಿಕ ವಿಭಾಗ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಬಂಟ್ವಾಳ ಇದರ ಸಹಭಾಗಿತ್ವದಲ್ಲಿ, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಅಂಗವಾಗಿ 91ನೇ ವಿಪತ್ತು ನಿರ್ವಹಣಾ ಸಮಿತಿಯ ಉದ್ಘಾಟನಾ ಮತ್ತು ತರಬೇತಿ ಕಾರ್ಯಕ್ರಮ ಸೋಮವಾರ ಬಂಟ್ವಾಳದ ಉನ್ನತಿ ಸೌಧದಲ್ಲಿ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕೆಲಸಕ್ಕೆ ದೇವರ ಆಶೀರ್ವಾದ ಇದೆ. ಕಷ್ಟದಲ್ಲಿದ್ದವರಿಗೆ ಉಪಕಾರ ಮಾಡಿದವರಿಗೆ ಅದರ ಫಲ ದೇವರು ನೀಡುತ್ತಾನೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿದರು. ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಭರತ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ, ಶ್ರೀನಿವಾಸ್ ಕಾಮತ್, ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ ಕಿಶೋರ್ ಕುಮಾರ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂಟ್ವಾಳ ವಲಯ ಯೋಜನಾಧಿಕಾರಿ ಬಾಲಕೃಷ್ಣ ಎಂ. ಸ್ವಾಗತಿಸಿದರು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಯೋಜನಾಧಿಕಾರಿ ಜಯವಂತ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಪಿ.ಆಚಾರ್ಯ ವಂದಿಸಿದರು. ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

ಯಾವುದೇ ಅನಾಹುತ, ದುರ್ಘಟನೆಗಳು ಸಂಭವಿಸಿದಾಗ ಸಮಾಜದ ನಾಗರಿಕನಾಗಿ ಮಾನವ ಧರ್ಮವನ್ನು ಪಾಲಿಸಿ ತನ್ನಿಂದಾಗುವ ಸೇವೆಯನ್ನು ನೀಡಬೇಕು. ಬಂಟ್ವಾಳದ ತಂಡ ಮಾದರಿ ತಂಡವಾಗಿ ಮೂಡಿಬರಲಿ. -ಮಹಾಬಲ ಕುಲಾಲ್, ಯೋಜನೆಯ ಜಿಲ್ಲಾ ನಿರ್ದೇಶಕ