ಬಂಟ್ವಾಳ: ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಪ್ರಾಂಶುಪಾಲ ನರಸಿಂಹ ಭಟ್ ಎಚ್. ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥ ಶಂಕರ್ ರಾವ್ ಬಿ. ಅವರು ನಾಯಕತ್ವ ಮತ್ತು ತಂಡಗಳ ನಿರ್ವಹಣೆ ಬಗ್ಗೆ ತರಬೇತಿ ನೀಡಿದರು.
ಕಾರ್ಗಿಲ್ ವಿಜಯ ದಿವಸ್ ಮತ್ತು ರಾಷ್ಟ್ರೀಯ ಭಾವೈಕ್ಯ ವಿಷಯದ ಕುರಿತು ವಿದ್ಯಾರ್ಥಿಗಳಿಂದ ರಚಿತವಾದ ಸೇವಾ ಕಲರವ- ಯುವ ಮನಸ್ಸುಗಳ ನವ ಚಿಂತನೆ ಎನ್ನುವ ಭಿತ್ತಿಪತ್ರ ಅನಾವರಣಗೊಳಿಸಲಾಯಿತು.
ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಭಗವಾನ್ ಪ್ರಸಾದ್, ಸಿವಿಲ್ ವಿಭಾಗ ಮುಖ್ಯಸ್ಥ ಮೋಹನ್ ರಾಜ್ ಜಿ.ಎಸ್., ಮಹಿಳಾ ಘಟಕದ ಮುಖ್ಯಸ್ಥೆ ಭುವನೇಶ್ವರಿ, ರೆಡ್‌ಕ್ರಾಸ್ ಸಂಯೋಜಕ ಉದಯ್ ಕುಮಾರ್, ಕ್ರೀಡಾಧಿಕಾರಿ ರಿತಿಕಾ ಕೋಟ್ಯಾನ್ ಎಚ್., ಉದ್ಯೋಗ ಮತ್ತು ತರಬೇತಿ ಅಧಿಕಾರಿ ಮಹೇಶ್ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಭಾಸ್ಕರ್ ಎಲ್. ಪ್ರಾಸ್ತಾವಿಕ ಮಾತನಾಡಿದರು. ಎನ್‌ಎಸ್‌ಎಸ್ ವಿದ್ಯಾರ್ಥಿ ನಾಯಕ ಸಿಂಚನ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯಕ್ರಮಾಧಿಕಾರಿ ವಿಕೇಶ್ ವಂದಿಸಿದರು.