ಮಡಿಕೇರಿ: ನಾವು ಉಣ್ಣುವ ಅನ್ನದ ಹಿಂದಿರುವ ಕೆಲಸಗಳ ಪರಿಕಲ್ಪನೆಯ ಬಗ್ಗೆ ಹೆಚ್ಚಿನ ಮಕ್ಕಳಿಗೆ ಯಾವುದೇ ಅರಿವು ಇರುವುದಿಲ್ಲ. ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೊಡಗು ಗೌಡ ಯುವ ವೇದಿಕೆಯಿಂದ ಕಗ್ಗೋಡ್ಲುವಿನಲ್ಲಿರುವ ಮಂದ್ರೀರ ತೇಜಸ್ ನಾಣಯ್ಯ ಅವರ ಗದ್ದೆಯಲ್ಲಿ ಶಾಲಾ ಮಕ್ಕಳಿಗೆ ಅಗೆ ಮತ್ತು ನಾಟಿ ಬಗ್ಗೆ ತರಬೇತಿ ಇತ್ತೀಚೆಗೆ ನೀಡಲಾಯಿತು.
ಮಡಿಕೇರಿಯ ಲಿಟ್ಲ್ ಫ್ಲವರ್ ಶಾಲೆಯ ಪುಟ್ಟಪುಟ್ಟ ಮಕ್ಕಳು ಮೊದಲ ಬಾರಿಗೆ ಕೆಸರಿನ ಗದ್ದೆಯಲ್ಲಿ ಇಳಿದು ಖುಷಿಪಟ್ಟರು. ಅಗೆ ತೆಗೆಯುವಾಗ ವಹಿಸಬೇಕಾದ ಎಚ್ಚರಿಕೆ, ನಾಟಿ ನೆಡುವಾಗ ಕಲಿಯಬೇಕಾದ ಕೃಷಿ ನಿಯಮಗಳ ಬಗ್ಗೆ ತಿಳಿಹೇಳಲಾಯಿತು. ಮಕ್ಕಳು ಕುತೂಹಲದಿಂದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವ ಮೂಲಕ ತಮ್ಮ ತಟ್ಟೆಯ ಅನ್ನದ ಹಿಂದಿರುವ ಕೃಷಿ ಕತೆಯ ಅನುಭವ ಹೊಂದಿದರು. ನಂತರ ತೇಜಸ್ ಅವರ ಕೆರೆಯಲ್ಲಿ ಮಕ್ಕಳಿಗೆ ಬೋಟಿಂಗ್ ಮಾಡಿಸಲಾಯಿತು. ಮೀನು ಮತ್ತು ಬಾತುಕೋಳಿಗಳಿಗೆ ಸ್ವತಃ ಆಹಾರ ನೀಡುವುದರೊಂದಿಗೆ ಅವುಗಳ ಜೀವನ ಕ್ರಮ ಅರಿತುಕೊಂಡರು.
ಮಕ್ಕಳಿಗಾಗಿ ಊರಿನ ದಾನಿಗಳಾದ ಬಳಪದ ರೋಷನ್ ಮಂದಣ್ಣ, ಕೊಡಂದಿರ ಪೊನ್ನಣ್ಣ, ತುಮ್ತಜಿರ ದಯಾನಂದ್, ಕುಂಜಿಲನ ಮೋಹನ್ ನೆರವು ನೀಡಿದರು. ಕೊಡಗು ಗೌಡ ಯುವ ವೇದಿಕೆ ಪದಾಧಿಕಾರಿಗಳು, ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರು ಮಕ್ಕಳೊಂದಿಗೆ ಅಗೆ ಮತ್ತು ನಾಟಿ ಮಾಡುವುದರಲ್ಲಿ ಕೈಜೋಡಿಸಿದರು.