ಜಿಲ್ಲೆ

ಬುಡಕಟ್ಟು ಮಕ್ಕಳ ಮೊಗದಲ್ಲಿ ‘ವನ ಬೆಳಕು’

Dakshina Kannada

ಮಂಗಳೂರು: ಕೋವಿಡ್‌ನಿಂದ 10 ತಿಂಗಳು ಶಾಲಾ ಕಾಲೇಜು ಇಲ್ಲದ ಕಾರಣ ಮಕ್ಕಳ ಮನಸ್ಸಿಗೆ ಒಂದು ರೀತಿಯ ಜಡತ್ವ..

ನಗರದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ, ಕೋಚಿಂಗ್, ಮನರಂಜನೆಯಾದರೂ ಇದೆ, ಆದರೆ ಅಡವಿ ಮಕ್ಕಳ ಕಥೆಯೇನು? ಎಲ್ಲದಕ್ಕೂ ಶಾಲೆಯನ್ನೇ ಅವಲಂಬಿಸಿರುವ ಅವರ ಮನೋವಿಕಾಸದ ಬಗೆ ಹೇಗೆ? ಈ ಬಗ್ಗೆ ಚಿಂತಿಸಿದ ಮಂಗಳೂರಿನ ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಯೋಚಿಸಿದ್ದು ಅಡವಿಯ ತೆಕ್ಕೆಯಲ್ಲೇ ಬುಡಕಟ್ಟು ಸಮುದಾಯದ ಮಕ್ಕಳಿಗೆ ‘ವನ ಬೆಳಕು’ ಶಿಬಿರ.

ಜಡ ಹಿಡಿದ ಮಕ್ಕಳ ಮನಸ್ಸನ್ನು ಚುರುಕುಗೊಳಿಸುವ ಹೊಳ್ಳರ ಆಶಯಕ್ಕೆ ಸಮಾನ ಮನಸ್ಕರು ಕೈಜೋಡಿಸಿದರು. ಡಿಸೆಂಬರ್ 3ರಿಂದ ಶಿಬಿರ ಪ್ರಾರಂಭಿಸಲಾಗಿದೆ. ಯಲ್ಲಾಪುರ, ಅಂಕೋಲ, ಮುಂಡಗೋಡ, ಜೋಯಿಡಾ, ಅಣಶಿ, ದಾಂಡೇಲಿ, ಹಳಿಯಾಳ, ಕಾಳಿ ಹುಲಿ ರಕ್ಷಿತಾರಣ್ಯದ ಆಸುಪಾಸು ಎರಡು ಹಂತಗಳಲ್ಲಿ ‘ವನ ಬೆಳಕು’ ಶಿಬಿರದ ಬೆಳಕು ಹರಡಿದ್ದಾಗಿದೆ.

ಮಕ್ಕಳ ಮುಗ್ಧ ಮನಸ್ಸು ಅರ್ಥೈಸಿಕೊಂಡು, ಅವರಿಗೆ ಆಪ್ತವೆನಿಸುವ ಚಟುವಟಿಕೆ ನಡೆಸುವುದು, ಆಟ ಆಡಿಸುವುದು, ನಾಟಕ, ಪ್ರಹಸನ, ಹಲವು ಕೌಶಲಗಳನ್ನು ಕಲಿಸುವುದು ಶಿಬಿರದ ಮುಖ್ಯಾಂಶ. ಪ್ರಕೃತಿ ಮಡಿಲಲ್ಲೇ ವಿಶಾಲ ಬಯಲಿನ ಬದಿ, ದೊಡ್ಡ ಮರದ ಅಡಿ, ಅಡವಿಯ ಮಧ್ಯೆ ಈ ಶಿಬಿರಗಳು ನಡೆದಿವೆ. ಕಾಗದದಿಂದ ಮುಖವಾಡ ತಯಾರಿ, ನೃತ್ಯ, ಸಂಗೀತ, ಆಕರ್ಷಕ ಕೈ ಬರಹ, ಗಾಳಿಪಟ ತಯಾರಿ ಇತ್ಯಾದಿ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಜೋಡಿಸಿಕೊಳ್ಳಲಾಗಿದೆ. ಸಹಜ ವಾತಾವರಣದಲ್ಲಿ ಶಾಲೆಗಿಂತಲೂ ಹೆಚ್ಚು ಖುಷಿಯಲ್ಲಿ ಮಕ್ಕಳು ಕಲಿತುಕೊಳ್ಳುತ್ತಾರೆ. ಕರೊನಾದಿಂದ ಅವರ ಮನಸ್ಸು ಮುದುಡಿರುವುದನ್ನು ಅರಳಿಸುವುದಕ್ಕೆ ಒತ್ತು ನೀಡಲಾಗುತ್ತಿದೆ ಎನ್ನುತ್ತಾರೆ ದಿನೇಶ್ ಹೊಳ್ಳ.

ಅವರ ತಂಡದಲ್ಲಿ ಭವನ್, ಅರವಿಂದ ಕುಡ್ಲ, ಮಮತಾ, ಗಿರಿಧರ ಕಾಮತ್, ನಾಗರಾಜ್ ಕೂವೆ, ಕಲಾವಿದ ಗಣೇಶ ಸೋಮಯಾಜಿ ಯೋಗೀಶ್, ಸುಧಾ ನಾಯಕ್ ಮುಂತಾದವರು ತರಬೇತಿಯ ಹೊಣೆ ಹೊತ್ತಿದ್ದಾರೆ.

ಪಣಂಬೂರು ವಾಸುದೇವ ಐತಾಳ್ ಮತ್ತು ಮಂಗಳೂರಿನ ಎಂಸಿಎಫ್ ಕಂಪನಿಯವರು ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿಕೊಂಡು ಮಕ್ಕಳ ಹಲವು ಬೇಡಿಕೆ ಈಡೇರಿಸಿದ್ದಾರೆ.

ಹಲವರ ಸಹಕಾರದಿಂದ ನಿರೀಕ್ಷೆಗೂ ಮೀರಿ ‘ವನ ಬೆಳಕು’ ಯಶಸ್ವಿಯಾಗಿದೆ. ಮಕ್ಕಳು, ಹೆತ್ತವರು, ಊರಿನವರು ತುಂಬ ಸಹಕಾರ ನೀಡಿದ್ದಾರೆ. ಬುಡಕಟ್ಟು ಮಕ್ಕಳ ಮೊಗದಲ್ಲಿ ನಗೆಯರಳಿದೆ.

- ದಿನೇಶ್ ಹೊಳ್ಳ, ಸಹ್ಯಾದ್ರಿ ಸಂಚಯ