ಜಿಲ್ಲೆ

ಮ್ಯೂಸಿಯಂ ಯಕ್ಷಗಾನ ಕ್ಷೇತ್ರಕ್ಕೆ ಬೃಹತ್ ಕೊಡುಗೆ : ದಿನೇಶ ಶ್ರೀನಿವಾಸರಾವ್ ಅನಿಸಿಕೆ

ಕಾಸರಗೋಡು: ತೆಂಕುತಿಟ್ಟು ಯಕ್ಷಗಾನದ ಶಿಕ್ಷಕರಿಗೆ ತರಬೇತಿಯನ್ನು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಆರಂಭಿಸಲಾಯಿತು. ಕಾರ್ಯಕ್ರಮಕ್ಕೆ ಅಮೆರಿಕದಿಂದ ಆಗಮಿಸಿದ ಕಲಾಪೋಷಕ ದಿನೇಶ ಶ್ರೀನಿವಾಸ ರಾವ್, ಮನೋರಮಾ ದಿನೇಶ ಶ್ರೀನಿವಾಸರಾವ್ ಹಾಗೂ ಕರ್ನಾಟಕ ಬ್ಯಾಂಕ್‌ನ ಡಿ.ಜಿ.ಎಂ.ವಸಂತ ಹೇರ್ಳೆ ಚಾಲನೆ ನೀಡಿದರು. ನಾಟ್ಯಗುರು ಕರ್ಗಲ್ಲು ವಿಶ್ವೇಶ್ವರ ಭಟ್ ತರಬೇತಿ ನೀಡಲಿದ್ದಾರೆ.

ಪ್ರತಿಷ್ಠಾನದಲ್ಲಿರುವ ಪಣಂಬೂರು ವೆಂಕಟ್ರಾಯ ಐತಾಳರ ಹೆಸರಿನ ತೆಂಕುತಿಟ್ಟು ಯಕ್ಷಗಾನ ಮ್ಯೂಸಿಯಂ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದೆ. ಸಾಂಸ್ಕೃತಿಕ ಭವನಕ್ಕೆ ಅಧ್ಯಯನ ಸಲುವಾಗಿ ಬರುವವರಿಗೆ ಯಕ್ಷಗಾನ ಮ್ಯೂಸಿಯಂ ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿ ಎಂದು ಮನೋರಮಾ ದಿನೇಶ ಶ್ರೀನಿವಾಸ ರಾವ್ ತಿಳಿಸಿದರು.

ಸಾಂಸ್ಕೃತಿಕ ವಲಯ, ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕ್ ತಮ್ಮಿಂದಾಗುವ ಸಹಕಾರದ ಕೊಡುಗೆ ನೀಡುತ್ತಿದ್ದು, ಬ್ಯಾಂಕಿನ ಹೊಸ ಯೋಜನೆಗಳನ್ನು ಗ್ರಾಹಕರಿಗೆ ವಸಂತ ಹೇರ್ಳೆ ಮನವರಿಕೆ ಮಾಡಿದರು. ದಿನೇಶ ಶ್ರೀನಿವಾಸರಾವ್ ಮತ್ತು ಮನೋರಮಾ ರಾವ್ ಅವರನ್ನು ಸಿರಿಬಾಗಿಲು ಪ್ರತಿಷ್ಠಾನದ ಮಹಾಪೋಷಕರಾಗಿ ಹಾಗೂ ವಸಂತ ಹೇರ್ಳೆ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್, ಲಕ್ಷ್ಮೀನಾರಾಯಣ ತಂತ್ರಿ ಕಾವು ಮಠ, ಜಗದೀಶ್ ಕೂಡ್ಲು, ಸುಮಿತ್ರಾ ಮಯ್ಯ ಮುಂತಾದವರು ಉಪಸ್ಥಿತರಿದ್ದರು. ರಾಮಕೃಷ್ಣಯ್ಯ ಸ್ವಾಗತಿಸಿದರು. ಡಾ.ಶ್ರುತಕೀರ್ತಿ ರಾಜ್ ನಿರೂಪಿಸಿದರು. 20ಕ್ಕೂ ಹೆಚ್ಚು ಶಿಕ್ಷಕರಿಗೆ ಪ್ರಥಮ ಹಂತದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ ತರಬೇತಿ ನೀಡಿದರು.