ಜಿಲ್ಲೆ

ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿ: ಡಯಟ್ ಉಪಪ್ರಾಂಶುಪಾಲ ರಾಮು ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಂತ್ರಿಕ ವ್ಯವಸ್ಥೆಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸಬೇಕಿದೆ ಎಂದು ಡಯಟ್ ಉಪ ಪ್ರಾಂಶುಪಾಲ ಎನ್.ಎಂ.ರಾಮು ಸಲಹೆ ನೀಡಿದರು.

ನಗರದ ಡಯಟ್ ಕಚೇರಿ ಸಭಾಂಗಣದಲ್ಲಿ ಅಮೆರಿಕನ್ ಇಂಡಿಯ ಫೌಂಡೇಷನ್, ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸಂಸ್ಥೆ ಸಹಯೋಗದಲ್ಲಿ  ಆಯೋಜಿಸಿದ್ದ ಮುಖ್ಯಶಿಕ್ಷಕರ ಸಮಾಲೋಚನಾ ಸಭೆ ಹಾಗೂ ಶಿಕ್ಷಕರರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ 100 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಶಾಲೆಗಳಿಗೂ ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಕಳೆದ ವರ್ಷವೂ ತಾಂತ್ರಿಕ ಶಿಕ್ಷಣ ತರಬೇತಿ ನೀಡಲಾಗಿತ್ತು. ಈ ಬಾರಿಯೂ ಅದನ್ನು ಮುಂದುವರಿಸಲಾಗಿದೆ. ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡುವ ಮುನ್ನ ಶಿಕ್ಷಕರು ಆ ನಿಟ್ಟಿನಲ್ಲಿ ತಯಾರಿ ನಡೆಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿಜಿಟಲ್ ಕಲಿಕೆಯಲ್ಲಿ ಐಸಿಟಿ-1, 2 ಮತ್ತು 3ನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಅಮೆರಿಕನ್ ಇಂಡಿಯಾ ಫೌಂಡೇಷನ್ ಬೆಂಗಳೂರು ಶಾಖೆಯ ಮುಖ್ಯಸ್ಥ ರಾಜಗುರು ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಯೋಜಕ ಮಂಜುನಾಥ, ಕ್ಲಸ್ಟರ್ ಸಂಯೋಜಕ ಅಮಿತ್‌ಕುಮಾರ್, ಸಂಯೋಜಕರಾದ ವಿಶಾಲಾಕ್ಷಿ, ಕೆ.ರಾಗಿಣಿ, ಬಿಂದಿಯಾ ಎಸ್. ವಿನಾಯಕ, ಕೆ.ವಿ.ವಿಕಾಸ್, ಎಚ್.ಟಿ.ಅಭಿಷೇಕ್, ಸುನೀಲ್‌ಕುಮಾರ್, ದೇವರಾಜು ಇತರರಿದ್ದರು.