ಜಿಲ್ಲೆ

ಬೀದಿಬದಿ, ಡಾಬಾ, ಆಹಾರ ತಯಾರಿಕರಿಗೆ ತರಬೇತಿ

ಮೈಸೂರು: ಬೀದಿಬದಿ ಮತ್ತು ಡಾಬಾ, ಆಹಾರ ತಯಾರಿಕರಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಕರ್ನಾಟಕ ಪ್ರವಾಸೋದ್ಯಮ ಮತ್ತು ಕೆಎಸ್‌ಟಿಡಿಸಿ ಸಹಯೋಗದಲ್ಲಿ ನಗರದಲ್ಲಿ ಎರಡು ದಿನಗಳ ವಿಶೇಷ ತರಬೇತಿ ಆಯೋಜಿಸಲಾಗಿತ್ತು.

ಈ ವಿನೂತನ ಕಾರ್ಯಕ್ರಮದಲ್ಲಿ ಆಹಾರದ ಸುರಕ್ಷತೆ ಮತ್ತು ನೈರ್ಮಲ್ಯ, ಪ್ರವಾಸಿಗರೊಂದಿಗೆ ವ್ಯವಹರಿಸುವ ವಿಧಾನ ಮತ್ತು ಉತ್ತಮ ಸೇವೆ ನೀಡುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ಅಲ್ಲದೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಪರಿಸರ ಸ್ನೇಹಿ ಆಚರಣೆಗಳ ಜಾಗೃತಿ ಮತ್ತು ಆಹಾರ ಗುಣಮಟ್ಟ ಕಾಪಾಡುವ ವಿಧಾನಗಳು, ನಿಯಮಗಳ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು.

ಪ್ರವಾಸೋದ್ಯಮದ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಮಾತನಾಡಿ, ಬೀದಿ ಆಹಾರ ಸಂಸ್ಕೃತಿ ಕರ್ನಾಟಕದ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದೆ. ಈ ತರಬೇತಿ ಕಾರ್ಯಕ್ರಮದ ಮೂಲಕ ನಾವು ಪ್ರವಾಸಿಗರಿಗೆ ಸುರಕ್ಷಿತ ಮತ್ತು ನೈರ್ಮಲ್ಯ ವಿವಿಧ ಆಹಾರ ಸೇವೆಯನ್ನು ಖಾತ್ರಿಪಡಿಸುತ್ತಿದ್ದೇವೆ ಎಂದು ತಿಳಿಸಿದರು.

ತರಬೇತಿಯಲ್ಲಿ 48 ಬೀದಿಬದಿ ಮತ್ತು ಡಾಬಾ ಆಹಾರ ವ್ಯಾಪಾರಿಗಳು ಭಾಗವಹಿಸಿದ್ದರು. ತರಬೇತಿ ಪೂರ್ಣಗೊಳಿಸಿದ ವ್ಯಾಪಾರಿಗಳಿಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಐಎಚ್‌ಎಂನ ಎಂ.ವಿ ಸುರೇಶ್, ರಾಣಾಜಾಯ್ ಚೌದ್ರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎಂ. ಪ್ರಭುಸ್ವಾಮಿ ಇತರರು ಇದ್ದರು.